

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಂಟೂ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆದಿದ್ದು, ಈ ತಿಂಗಳ 20ಕ್ಕೆ ಮುಕ್ತಾಯವಾಗಲಿದೆ ಎಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಗಣತಿದಾರರಿಂದ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಮೊಬೈಲ್ ತಂತ್ರಾಂಶದ ಮೂಲಕ ಸರ್ವೆ ನಡೆದಿದ್ದು, ಈವರೆಗೆ ಎಲ್ಲ ವಲಯಗಳಲ್ಲಿ ಒಟ್ಟು 23,407 ಬೀದಿ ಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಸಮೀಕ್ಷೆಯ ಅನುಸಾರ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು. ಅಲ್ಲದೇ ವಲಯ ಮಟ್ಟದಲ್ಲಿ ಪಟ್ಟಣ ಮಾರಾಟ ಸಮಿತಿಗಳನ್ನು ರಚಿಸಿ, ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020ರಂತೆ ಬೀದಿ ವ್ಯಾಪಾರಿಗಳ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪಾಲಿಕೆಯಿಂದ ವಿವಿಧ ಸೌಲಭ್ಯಗಳು ಲಭ್ಯ:
ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳಿದ್ದು, ಅವುಗಳನ್ನು ಲಾನುಭವಿಗಳಿಗಳಿಗೆ ತಲುಪಿಸಲು ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಪಿಎಂ ಸ್ವನಿಧಿ ಮಾತ್ರವಲ್ಲದೆ, ಪಾಲಿಕೆಯ ಕಲ್ಯಾಣ ವಿಭಾಗದಿಂದ ಇ-ಮಾರಾಟ ವಾಹನ ಖರೀದಿಗೆ ಸಹಾಯಧನ, ಒಂಟಿ ಮನೆ/ಅಮೃತ ಮಹೋತ್ಸವ ಮನೆ ಯೋಜನೆಗೆ ಸಹಾಯಧನ, ಗಂಭೀರ ಸ್ವರೂಪ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ವೆಚ್ಚ ಮರು ಪಾವತಿ, ಕೌಶಲ ತರಬೇತಿ ಕಾರ್ಯಕ್ರಮ, ಮಕ್ಕಳ ಶಿಕ್ಷಣಕ್ಕೆ ಶುಲ್ಕ ಮರುಪಾವತಿ ಸೇರಿ ಇನ್ನಿತರ ಸೌಲಭ್ಯಗಳಿವೆ ಎಂದಿದ್ದಾರೆ.
ಡಿ.20ರ ಬಳಿಕ ಸಮೀಕ್ಷೆ ಸ್ಥಗಿತ:
ಸಮೀಕ್ಷಾ ಕಾರ್ಯವನ್ನು ಡಿ.20ರವರೆಗೆ ನಡೆಸಲಾಗುತ್ತದೆ. ಇದುವರೆಗೆ ಬೀದಿ ಬದಿ ವ್ಯಾಪಾರಿಗಳ ಸರ್ವೆಯಲ್ಲಿ ಪಾಲ್ಗೊಳ್ಳದವರು ಆಯಾ ವಲಯ ಜಂಟಿ ಆಯುಕ್ತರ ಕಚೇರಿಗೆ ಭೇಟಿ ನೀಡಿ ಹೆಸರು ನೊಂದಾಯಿಸಿಕೊಳ್ಳಬೇಕು. ಗಡುವಿನ ಬಳಿಕ ಸಮೀಕ್ಷೆ ಕೊನೆಗೊಳ್ಳಲಿದೆ. ಆನಂತರ ಬೀದಿ ಬದಿ ವ್ಯಾಪಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಾಗೂ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಎಂದು ಸುರಳ್ಕರ್ ತಿಳಿಸಿದ್ದಾರೆ.
ಈವರೆಗಿನ ವಲಯವಾರು ಸಮೀಕ್ಷೆ ವಿವರ:
ವಲಯ ವ್ಯಾಪಾರಿಗಳ ಸಂಖ್ಯೆ
ಪೂರ್ವ 3,067
ಪಶ್ಚಿಮ 5,727
ದಕ್ಷಿಣ 4,417
ಆರ್.ಆರ್.ನಗರ 3,448
ಬೊಮ್ಮನಹಳ್ಳಿ 2,156
ಮಹದೇವಪುರ 1,669
ಯಲಹಂಕ 1,572
ದಾಸರಹಳ್ಳಿ 1,351
ಒಟ್ಟು 23,407