ಅ.೨೫ ರಿಂದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ

dc sabhe
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆಯು ಅ.೨೫ ರಿಂದ ನ.೩ ರವರೆಗೆ ನಡೆಯಲಿದ್ದು, ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಸಮೀಕ್ಷೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಮೀಕ್ಷೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಮೀಕ್ಷೆ ನಡೆಸಿ ಕಾಲಮಿತಿಯಲ್ಲಿ ನಿಖರ ಮಾಹಿತಿ ಒದಗಿಸಬೇಕು. ನಗರಾಭಿವೃದ್ಧಿ ಕೋಶ ಜೊತೆಗೆ ಪಂಚಾಯತ್ ರಾಜ್ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ ೩೨೪/೨೦೨೦ ತೀರ್ಪಿನ ಅನ್ವಯ ರಾಜ್ಯದಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆಯನ್ನು ಕೈಗೊಂಡು ಕೇಂದ್ರ ಸರ್ಕಾರದ ನಮಸ್ತೆ ಪೋರ್ಟಲ್‌ನ ಎಂ.ಎಸ್.ಸರ್ವೇ ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ಸಂಬಂಧ ಅ.೨೫ ರಿಂದ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಅಧಿಕಾರಿಗಳು ಸಹಕರಿಸುವಂತೆ ಕೋರಿದರು.

ಸಮೀಕ್ಷೆ ಸಂಬಂಧಿಸಿದಂತೆ ಅರ್ಜಿಯ ಮಾನ್ಯತೆಯನ್ನು ಪರಿಶೀಲಿಸಿ ವ್ಯಾಲಿಡೇಟರ್ ಲಾಗ್‌ಇನ್‌ಗೆ ಕಳುಹಿಸಲು ಕ್ರಮವಹಿಸಬೇಕಿದೆ. ಹಾಗೆಯೇ ಸಮೀಕ್ಷಾ ಲಾಗಿನ್‌ನಿಂದ ಬಂದ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಅರ್ಜಿಯ ನೈಜತೆ ಬಗ್ಗೆ ಖಾತರಿಪಡಿಸಿಕೊಂಡು ಪರಿಶೀಲಿಸಿ ಜಿಲ್ಲಾ ವ್ಯಾಲಿಡೇಟರ್ ಲಾಗಿನ್‌ಗೆ ಅರ್ಜಿಯನ್ನು ಕಳುಹಿಸಬೇಕಿದೆ. ಸಮೀಕ್ಷೆ ಕಾರ್ಯದ ಅರ್ಜಿಯು ತಪ್ಪಾಗಿದ್ದಲ್ಲಿ ತಿರಸ್ಕರಿಸಬೇಕಿದೆ ಎಂದರು.

ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಮೀಕ್ಷೆಗಾರರಾಗಿ ನಗರ ಸ್ಥಳೀಯ ಸಂಸ್ಥೆಯ ಆರೋಗ್ಯಾಧಿಕಾರಿಗಳು, ಪರಿಶೀಲನಾ ಅಧಿಕಾರಿಗಳಾಗಿ ನಗರ ಸ್ಥಳೀಯ ಸಂಸ್ಥೆಯ ಸಹಾಯಕ ಅಭಿಯಂತರರು, ವ್ಯಾಲಿಡೇಟರಾಗಿ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು, ಜಿಲ್ಲಾ ವ್ಯಾಲಿಡೇಟರ್ ಆಗಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿ ಸದಸ್ಯರಾದ ರಂಗಸ್ವಾಮಿ ಮಾತನಾಡಿ, ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಪದ್ಧತಿ ಇನ್ನೂ ಸಹ ಜೀವಂತವಾಗಿದೆ. ಈ ಸಂಬಂಧ ಪರಿಶೀಲಿಸಿ ಅರ್ಹರನ್ನು ಗುರುತಿಸುವಂತೆ ಕೋರಿದರು.

ಮತ್ತೊಬ್ಬ ಸದಸ್ಯರಾದ ಆರ್ಮೂಗಂ ಮಾತನಾಡಿ, ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ಕ್ರಮವಹಿಸಬೇಕಿದೆ ಎಂದರು.

ಸದಸ್ಯರಾದ ಓಬಳಿ, ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಡಿವೈಎಸ್‌ಪಿ ರವಿ, ತಾ.ಪಂ.ಇಒ ಅಪ್ಪಣ್ಣ, ಪರಮೇಶ್ ಕುಮಾರ್, ಜಿ.ಪಂ.ಸಹಾಯಕ ನಿರ್ದೇಶಕ ಶ್ರೀನಿವಾಸ್, ಪೌರಾಯುಕ್ತ ಎಚ್.ಆರ್.ರಮೇಶ್, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಷಪ್ರಸಾದ್, ಪಿ.ಕೆ.ನಾಚಪ್ಪ, ರೀತು ಸಿಂಗ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net