ದಾಸನಪುರದಲ್ಲಿ ಪ್ರವಾಹ ಪೀಡಿತ ಮನೆಗಳ ಸರ್ವೇ

9-kollegal-2
Published on

ಕೊಳ್ಳೇಗಾಲ: ಕಾವೇರಿ ಪ್ರವಾಹದಿಂದ ನದಿಪಾತ್ರ ಗ್ರಾಮ ದಾಸನಪುರದಲ್ಲಿ ಹಾನಿಗೊಳಗಾದ ಮನೆಗಳು ಹಾಗೂ ನೀರು ನುಗ್ಗಿದ ಮನೆಗಳ ಸರ್ವೇಯನ್ನು ಶುಕ್ರವಾರ ಕಂದಾಯ ಇಲಾಖೆ, ಆರ್‌ಡಿಪಿಆರ್, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಆರಂಭಿಸಿದ್ದಾರೆ.


ಜು.9ರಂದು ವಿಜಯವಾಣಿ ‘ಸಹಜ ಜೀವನಕ್ಕೆ ಮರಳಲು ಹೆಣಗಾಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಕಾವೇರಿ ಪ್ರವಾಹದಿಂದ ಗ್ರಾಮಗಳನ್ನು ತೊರೆದು ಕಾಳಜಿ ಕೇಂದ್ರ ಸೇರಿದ್ದ ಸಂತ್ರಸ್ತರು ನೆರೆ ತಗ್ಗಿದ ಮೇಲೆ ಗ್ರಾಮಗಳಿಗೆ ಹಿಂದಿರುಗಿ ಸಹಜ ಜೀವನಕ್ಕೆ ಮರಳಲು ಹೆಣಗಾಡುತ್ತಿರುವ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿ ಗಮನ ಸೆಳೆದಿತ್ತು.


ಹಾನಿಗೊಳಾಗಾಗಿ ಬಿರುಕು, ಕುಸಿತಕೊಳಗಾದ ಮನೆಗಳಲ್ಲಿ ಜನರು ಆತಂಕದಲ್ಲಿ ವಾಸಿಸುತ್ತಿದ್ದಾರೆ. ಪ್ರವಾಹದಿಂದ ಮನೆಗಳಿಗೆ ಕೊಳಚೆ, ತ್ಯಾಜ್ಯ ಮಿಶ್ರಿತ ನೀರು ನುಗ್ಗಿರುವ ಪರಿಣಾಮ ಗಬ್ಬು ನಾರುತ್ತಿದೆ. ಜನರು ಮನೆಯ ಶುಚಿತ್ವ ಮಾಡುವ ಕಾರ್ಯದಲ್ಲಿ ಹೈರಾಣಾಗಿದ್ದಾರೆ. 2019 ರಲ್ಲಿ ಸಂಭವಿಸಿದ ನೆರೆಯಲ್ಲಿ ನೀರು ನುಗ್ಗಿದ ಮನೆಗಳಿಗೆ ವಾರದೊಳಗೆ 10 ಸಾವಿರ ರೂ.ಪರಿಹಾರ ನೀಡಿದ್ದರು. ಆ ಹಣದಲ್ಲಿ ಮನೆಯ ಶುಚಿತ್ವವನ್ನು ಜನರು ಮಾಡಿಕೊಂಡಿದ್ದರು. ಆದರೆ, ಈ ಬಾರಿ ಕಾಳಜಿ ಕೇಂದ್ರದಿಂದ ಗ್ರಾಮಕ್ಕೆ ಹಿಂದಿರುಗಿದ ಜನರ ಪಾಡನ್ನು ಜಿಲ್ಲಾಡಳಿತ ಹಿಂದಿರುಗಿ ನೋಡಲಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಅಧಿಕಾರಿಗಳು ಜರೂರಾಗಿ ಮನೆ, ಬೆಳೆ ಹಾನಿ ಸರ್ವೇ ಮಾಡಿ ಪರಿಹಾರ ಒದಗಿಸಿ ಮನೆ ಕಟ್ಟಿಸಿಕೊಡಬೇಕೆಂದು ಒತ್ತಾಯಿಸಿದ್ದರು.


ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಕಂದಾಯ ಇಲಾಖೆ, ಆರ್‌ಡಿಪಿಆರ್, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ದಾಸನಪುರಕ್ಕೆ ದೌಡಾಯಿಸಿ ಮನೆ ಹಾನಿ, ನೀರು ನುಗ್ಗಿದ ಮನೆಗಳ ಪ್ರತ್ಯೇಕ ಸರ್ವೇ ಕಾರ್ಯ ಆರಂಭಿಸಿದ್ದಾರೆ. ತಹಸೀಲ್ದಾರ್ ಮಂಜುಳಾ ಅವರು ಸರ್ವೇ ಕಾರ್ಯದ ಸ್ಥಳದಲ್ಲಿದ್ದು, ಪಂಚಾಯತ್ ರಾಜ್ ಇಂಜಿನಿಯರ್ ಹಾಗೂ ಹೆಚ್ಚುವರಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶಿವಪ್ರಕಾಶ್, ಪಿಡಿಒ ರಾಜಮಣಿ ಮತ್ತಿತರ ಅಧಿಕಾರಿಗಳಿಗೆ ಸರ್ವೇ ಕಾರ್ಯವನ್ನು ಜರೂರಾಗಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net