ಶೇ.50 ಕೆರೆಗಳ ಸರ್ವೇ ಪೂರ್ಣ ಒತ್ತುವರಿ ತೆರವಿಗೆ ಸರ್ಕಾರ ಕ್ರಮ

When will the water in Agasabala Tarana lake_
ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದ ಕೆರೆ.
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಹಳ ವರ್ಷಗಳಿಂದ ಜಿಲ್ಲೆಯಲ್ಲಿನ ಕೆರೆಗಳ ಒತ್ತುವರಿ ತೆರವು ವಿಚಾರ ಸದ್ದು ಮಾಡುತ್ತಲೇ ಇದೆ. ಆಗಾಗ ಸರ್ಕಾರದ ಉನ್ನತ ವ್ಯಕ್ತಿಗಳು ಮತ್ತು ಅಧಿಕಾರಿಗಳು ಇದರ ಪ್ರಸ್ತಾಪ ಮಾಡುತ್ತಲೇ ಇದ್ದ ಪರಿಣಾಮ ಈಗ ಜಿಲ್ಲೆಯ ಶೇ.50ರಷ್ಟು ಕೆರೆಗಳ ಸರ್ವೇ ಪೂರ್ಣಗೊಂಡಿದೆ.

ಯಾವುದೇ ಗ್ರಾಮದ ನೀರಿನ ಸೆಲೆ ಅಲ್ಲಿನ ಕೆರೆ ಕಟ್ಟೆಗಳೇ ಆಗಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಇವುಗಳ ಒತ್ತುವರಿ ಹೆಚ್ಚಾದ ಕಾರಣ ತೆರವು ಕಾರ್ಯದ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಕೆರೆಗಳ ಒತ್ತುವರಿ ತೆರವಿಗೆ ಪ್ರಯತ್ನ ನಡೆಯುತ್ತಿದ್ದು, ಇದರ ಪರಿಣಾಮ ಇರುವ ಕೆರೆಗಳ ಸರ್ವೇ ಕಾರ್ಯ ನಡೆಯುತ್ತಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಒಟ್ಟಾರೆ 793 ಕೆರೆಗಳ ಸರ್ವೇ ಕಾರ್ಯವನ್ನು ಭೂದಾಖಲೆಗಳ ಇಲಾಖೆ ಪೂರ್ಣಗೊಳಿಸಿದೆ.

ಸಾವಿರಕ್ಕೂ ಹೆಚ್ಚು ಕೆರೆ

ಜಿಲ್ಲೆಯಲ್ಲಿ ಒಟ್ಟು 1496 ಕೆರೆಗಳು ಇವೆ. ಇವುಗಳಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 110, ಜಿಲ್ಲಾ ಪಂಚಾಯಿತಿಗೆ ಸೇರಿದ 1322, ಸ್ಥಳೀಯ ಸಂಸ್ಥೆಗಳಿಗೆ ಸೇರಿದ 61 ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 3 ಕೆರೆಗಳು ಸೇರಿವೆ. ಬಹುತೇಕ ಎಲ್ಲ ಕೆರೆಗಳು ಒತ್ತುವರಿಯಾಗಿದ್ದು, ಇವುಗಳನ್ನು ತೆರೆವುಗೊಳಿಸುವ ಸಾಹಸಕ್ಕೆ ಸಂಬಂಧಪಟ್ಟ ಇಲಾಖೆಗಳು ಕೈ ಹಾಕಿರಲೇ ಇಲ್ಲ. ಒಂದು ವೇಳೆ ಇದರ ಪ್ರಯತ್ನ ನಡೆದರೂ ಒತ್ತುವರಿದಾರರು ಬಲಾಢ್ಯರಾಗಿರುವ ಕಾರಣ ತೆರವು ಕಾರ್ಯವೂ ಅಷ್ಟು ಸುಲಭವೂ ಆಗಿರಲಿಲ್ಲ.

ಕ್ರಿಯಾ ಯೋಜನೆ

ಕೆರೆಗಳ ಸರ್ವೇ ಕಾರ್ಯದ ನಂತರವೇ ಒತ್ತುವರಿ ತೆರವು ಕಾರ್ಯ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಭೂ ದಾಖಲೆಗಳ ಇಲಾಖೆ ಬಾಕಿ ಇರುವ ಕೆರೆಗಳ ಸರ್ವೇ ಕಾರ್ಯಕ್ಕೆ ಕ್ರಿಯಾಯೋಜನೆಯನ್ನು ರೂಪಿಸಿ, 3 ತಿಂಗಳ ಗಡುವು ಸಹ ವಿಧಿಸಿಕೊಂಡಿತ್ತು. ಆದರೆ ಮತ್ತಷ್ಟು ಅತಿ ತುರ್ತು ಸರ್ವೇ ಕೆಲಸಗಳು ಆಗಬೇಕಿದ್ದ ಕಾರಣ ನಿಗದಿತ ಅವಧಿಯಲ್ಲಿ ಸರ್ವೇ ನಡೆಸಲು ಸಾಧ್ಯವಾಗದೆ ಕೊಂಚ ಹಿನ್ನಡೆಯನ್ನು ಇಲಾಖೆ ಅನುಭವಿಸಿದೆ. ಇದರ ಹೊರತಾಗಿಯೂ ಕ್ರಿಯಾ ಯೋಜನೆಯಂತೆ 343 ಕೆರೆಗಳನ್ನು ಸರ್ವೇ ಮಾಡಿದ್ದು, ಇನ್ನೂ 703 ಕೆರೆಗಳ ಸರ್ವೇ ಕಾರ್ಯವನ್ನು ಬಾಕಿ ಉಳಿಸಿಕೊಂಡಿದೆ.

ವಾರದಲ್ಲಿ 3 ದಿನ ಕಾರ್ಯ

ಸರ್ವೇ ಕಾರ್ಯಕ್ಕೆ ಜಿಲ್ಲೆಯ ಒಟ್ಟು 130 ಪರವಾನಗಿ ಹೊಂದಿದ ಸರ್ವೇಯರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇವರು ದೈನಂದಿನ ಕೆಲಸಗಳ ಜತೆಗೆ ವಾರದಲ್ಲಿ ಮೂರು ದಿನ ಕೆರೆಗಳ ಸರ್ವೇ ಕಾರ್ಯವನ್ನು ಮಾತ್ರ ಮಾಡಬೇಕಿದೆ. ಇದರ ಪರಿಣಾಮ ಕಳೆದ ಜು.13ರಿಂದ ಅ.13ವರೆಗೆ ಮೂರು ತಿಂಗಳ ಅವಧಿಯಲ್ಲಿ ಒಟ್ಟು 343 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಗಳ ಕೆಲಸ

ಒಂದೆಡೆ ಭೂ ದಾಖಲೆಗಳ ಇಲಾಖೆ, ಕೆಲಸದ ಒತ್ತಡದ ನಡುವೆಯೇ ಸರ್ವೇ ಕಾರ್ಯವನ್ನು ಮಾಡುತ್ತಿದೆ. ಸರ್ವೇ ಪೂರ್ಣಗೊಂಡ ಕೆರೆಗಳ ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆಯೇ ಕೆರೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸರ್ಕಾರದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸೂಚನೆಯನ್ನು ಸಹ ನೀಡಿದ್ದರು. ಆದರೆ ಇದುವರೆಗೂ ಎಷ್ಟು ಪ್ರಕರಣ ದಾಖಲು ಮಾಡಲಾಗಿದೆ, ಎಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಇಲಾಖೆಗಳು ತಮ್ಮ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಕೆರೆಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ವಾರದಲ್ಲಿ ಮೂರು ದಿನ ಸರ್ವೇಗಾಗಿಯೇ ಮೀಸಲಿಡಲಾಗಿದ್ದು, 703 ಕೆರೆಗಳ ಸರ್ವೇ ಕಾರ್ಯ ಬಾಕಿ ಉಳಿದಿದೆ. ಶೀಘ್ರವೇ ಉಳಿದ ಕೆರೆಗಳ ಸರ್ವೇ ಕೆಲಸವನ್ನೂ ಪೂರ್ಣಗೊಳಿಸಲಾಗುವುದು.

ಬಿ.ಆರ್.ಹನುಮೇಗೌಡ, ಉಪನಿರ್ದೇಶಕರು, ಭೂ ದಾಖಲೆಗಳ ಇಲಾಖೆ, ರಾಮನಗರ

-==

ಕೆರೆಗಳ ಸರ್ವೇ ಕಾರ್ಯ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಇದರ ಜತೆಜತೆಗೆ ಜಿಲ್ಲಾಡಳಿತ ಮುಲಾಜಿಲ್ಲದೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ

ಕೈಗೊಳ್ಳಬೇಕಿದೆ. ಬಲಾಢ್ಯರು ಹಾಗೂ ಪ್ರಭಾವಿಗಳಿಂದಲೇ ಒತ್ತುವರಿ ಹೆಚ್ಚಾಗಿದ್ದು, ಇದನ್ನು ಬಿಡಿಸುವ ಮೂಲಕ ಜಲ ಮೂಲಗಳ ರಕ್ಷಿಸಲು ಜಿಲ್ಲಾಡಳಿತ ಬದ್ಧತೆ ತೋರಬೇಕಿದೆ.

ಸಿ.ಪುಟ್ಟಸ್ವಾಮಿ, ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net