

ತಿಪಟೂರು: ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅತ್ಯಗತ್ಯ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಸೆ.22ರಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ತಾಲೂಕುಮಟ್ಟದಲ್ಲಿ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ನಗರದ ಕಲ್ಪತರು ಆಡಿಟೋರಿಯಂನಲ್ಲಿ ಉದ್ಘಾಟಿಸಿ ಮಾತನಾಡಿ, ಈ ಸಮೀಕ್ಷೆ ಮಾಡುವುದರಿಂದ ಹಿಂದುಳಿದ ವರ್ಗದವರಿಗೆ, ದೀನದಲಿತರಿಗೆ, ಹಾಗೂ ಶೋಷಿತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಅವಕಾಶವಾಗುತ್ತದೆ. ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ. ಎಲ್ಲ ಸಮೀಕ್ಷಾದಾರರು ಪ್ರತಿ ಮನೆಗೂ ತೆರಳಿ ಮಾಹಿತಿ ಪಡೆಯಬೇಕು ಎಂದರು.
ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಮಾತನಾಡಿ, ಶಿಕ್ಷಕರು ಯಾವ ಗೊಂದಲಕ್ಕೂ ಒಳಗಾಗದೆ ಕುಟುಂಬದ ಮುಖ್ಯಸ್ಥನಿಂದ ಸಮಗ್ರ ಮಾಹಿತಿ ಪಡೆಯಬೇಕು. ಸಮೀಕ್ಷೆಯಿಂದ ಯಾವುದೇ ಕುಟುಂಬವು ಹೊರಗುಳಿಯಬಾರದು ಎಂದು ಹೇಳಿದರು.
ಸಮೀಕ್ಷೆಯ ವೇಳೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿ ವಾಸ್ತವ್ಯದ ದೃಢೀಕರಣಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕಾಗುತ್ತದೆ. ಇದರ ಜತೆಗೆ ಕುಟುಂಬ ಸದಸ್ಯರ ವಿವರ, ಶೈಕ್ಷಣಿಕ ಅರ್ಹತೆ, ಉದ್ಯೋಗ, ಆದಾಯ ಮೂಲಗಳ ಮಾಹಿತಿ ಕೇಳಲಾಗುವುದು ಎಂದರು.
ತಾಲೂಕಿನಲ್ಲಿ 64,398 ಕುಟುಂಬಗಳಿದ್ದು, 640 ಶಿಕ್ಷಕರಿಗೆ 11 ಜನ ವಿಶೇಷ ತರಬೇತುದಾರರಿಂದ ಸಮೀಕ್ಷೆಯ ತರಬೇತಿ ನೀಡಲಾಯಿತು.
ತಾಪಂ ಇಒ ಎಚ್.ಎಮ್.ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಪೌರಯುಕ್ತ ವಿಶ್ವೇಶ್ವರ ಬದರಗಡೆ, ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಗ್ರೇಡ್-2 ತಹಸೀಲ್ದಾರ್ ಎಸ್.ಕೆ.ಜಗನ್ನಾಥ್, ಬಿ.ಆರ್.ಪಿಉಮೇಶ್‌ಗೌಡ, ಬಿ.ಆರ್.ಸಿ. ಕಚೇರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದಕ್ಷಿಣಮೂರ್ತಿ ಸೇರಿ ಶಿಕ್ಷಕರು ಇದ್ದರು.