

ಮೈಸೂರು: ಸಮಾಜದಲ್ಲಿ ಯಾರು ದುರ್ಬಲ ಎಂಬುದನ್ನು ಗುರುತಿಸಿ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ಅತ್ಯಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಾಗೃತ ಕರ್ನಾಟಕ, ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ, ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಚಾರಿತ್ರಿಕ ಹಿನ್ನೆಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದವರು ಹಾಗೂ ದಲಿತರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬಲ ತುಂಬಲು ಮೀಸಲಾತಿ ಕೊಡಲಾಗುತ್ತದೆ. ಯಾರು ಹಿಂದುಳಿದಿರುತ್ತಾರೋ ಅವರಿಗೆ ಶಕ್ತಿ ತುಂಬಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ನಮ್ಮ ಸಂವಿಧಾನ ಕೂಡ ಹೇಳುತ್ತದೆ. ಹಾಗಾಗಿ ದತ್ತಾಂಶ ಅಗತ್ಯವಿದ್ದು, ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಯಾವ ವರ್ಗದವರು ಹಿಂದುಳಿದಿದ್ದಾರೆ? ಅವರ ಸಾಮಾಜಿಕ ಹಾಗೂ ಔದ್ಯೋಗಿಕ ಸ್ಥಿತಿ ಏನು? ಎಂದು ತಿಳಿದುಕೊಂಡರೆ ಹಿಂದುಳಿದ ವರ್ಗದವರಿಗೆ ಬಲ ತುಂಬಲು ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಹಿಂದುಳಿದವರು ಒಗ್ಗಟ್ಟಿನಿಂದ ಈ ಸಮೀಕ್ಷೆ ಬೇಕು ಎಂದು ಕೇಳಬೇಕು. ಇದು ನಮ್ಮ ಅನುಕೂಲಕ್ಕಾಗಿ ಸರ್ಕಾರ ಮಾಡುತ್ತಿರುವುದು ಎಂದು ಇತರರಿಗೆ ಅರಿವು ಮೂಡಿಸಬೇಕು. ಒಗ್ಗಟ್ಟಿನಿಂದ ಇದ್ದರೆ ಮಾತ್ರ ಜಾತಿ ಸಮೀಕ್ಷೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಜಾತಿ ಸಮೀಕ್ಷೆಗೆ ಮುಂದಾದಾಗಲೆಲ್ಲ ವಿರೋಧ ವ್ಯಕ್ತವಾಗುತ್ತಲೇ ಇದೆ. ಅಂದಿನ ಆಳರಸರ ಕಾಲದಲ್ಲೂ ಬ್ರಾಹ್ಮಣರನ್ನು ಹೊರತುಪಡಿಸಿ ಇನ್ನುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ವಿರೋಧ ವ್ಯಕ್ತವಾಗಿತ್ತು ಎಂದರು.
ಈಗಲೂ ಪ್ರಬಲ ವರ್ಗದಿಂದಲೇ ಈ ಸಮೀಕ್ಷೆ ಮಾಡಲು ವಿರೋಧ ವ್ಯಕ್ತವಾಗುತ್ತಿದೆ. ಈ ಸಮೀಕ್ಷೆಯಿಂದ ಮುಂದುವರಿದಿರುವ ಜಾತಿಗಳನ್ನು ತುಳಿಯಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಸಮುದಾಯಗಳನ್ನು ತುಳಿಯಲು ಸಮೀಕ್ಷೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ಕೂಡ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದಿರುವುದು ಸರಿಯಲ್ಲ. ಈ ಮೂಲಕ ಮುಂದುವರಿದ ಸಮುದಾಯದವರು ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವವರೆಲ್ಲ ಎಲ್ಲ ಸೌಲಭ್ಯವನ್ನು ಅನುಭವಿಸಿರುವವರು. ಹಾಗಾಗಿ ಜಾತಿ ಸಮೀಕ್ಷೆ ಪರವಾಗಿ ಹಿಂದುಳಿದ ವರ್ಗಗಳು ಧ್ವನಿ ಎತ್ತಬೇಕು ಎಂಸು ಸಲಹೆ ನೀಡಿದರು.
ಜಾತಿ ವ್ಯವಸ್ಥೆಯೇ ನಮ್ಮ ಸಮಾಜ ಹಿಂದುಳಿಯಲು ಕಾರಣ. ಸಾವಿರಾರು ವರ್ಷಗಳಿಂದ ಬಹುಸಂಖ್ಯಾತ ಶೂದ್ರರು ಹಾಗೂ ದಲಿತರಿಗೆ ವಿದ್ಯೆ, ಅಧಿಕಾರ, ಆಸ್ತಿಯಿಂದ ವಂಚಿಸಲಾಗುತ್ತಿದೆ. ಬಹುಸಂಖ್ಯಾತರು ಹಿಂದುಳಿದಿದ್ದರಿಂದ ಈ ಸಮಾಜ ಹಾಗೂ ಭಾರತ ಮುಂದುವರಿಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ರಾಜಕೀಯದಲ್ಲಿ ಮೀಸಲಾತಿ ಇರುವುದರಿಂದ ದಲಿತರು, ಶೂದ್ರರು, ಹಿಂದುಳಿದವರು ಕಾಣಿಸಿಕೊಳ್ಳುತ್ತಾರೆ. ಆದರೆ ಸಮಾಜವನ್ನು ನಿಯಂತ್ರಿಸುವ ಆಯಾಕಟ್ಟಿನ ಅಧಿಕಾರ ಸ್ಥಾನದಲ್ಲಿ ಮೊದಲು ಕಾಣಿಸಿಕೊಳ್ಳುವುದೇ ಕೆಲವೇ ಸಮುದಾಯದವರು ಮಾತ್ರ ಎಂದು ತಿಳಿಸಿದರು.
ಜಾತಿ ವ್ಯವಸ್ಥೆ ಹೋಗಲಾಡಿಸಲು ಮೀಸಲಾತಿ, ಉದ್ಯೋಗ ಹಾಗೂ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಲಾಗಿದೆ. ಜಾತಿ ವ್ಯವಸ್ಥೆ ಹೋಗಲಾಡಿಸಲು ಇಷ್ಟು ಮಾಡಿದರೆ ಸಾಲದು, ಧರ್ಮ ಸುಧಾರಣೆಯನ್ನೂ ಮಾಡಬೇಕು ಎಂದು ತಿಳಿಸಿದರು.
ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಜಿ.ಕೆ.ಮೋಹನ್ ಪ್ರಸ್ತಾವನೆ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ವಿ.ವಾಸು ಮುಖ್ಯಭಾಷಣ ಮಾಡಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಅಹಿಂದ ಜವರಪ್ಪ, ಮಾಜಿ ಡಿವೈಎಸ್‌ಪಿ ಸುಹೇಲ್ ಅಹಮ್ಮದ್, ಸವಿತಾ ಪ.ಮಲ್ಲೇಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ವಕೀಲ ರಮೇಶ್‌ಗೌಡ ಇತರರು ಇದ್ದರು.