ಸಮೀಕ್ಷೆ: ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಡಿಸಿ ಸೂಚನೆ

dc sabhe
Published on

ಮಡಿಕೇರಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮೇ.೫ ರಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಸಂಬಂಧ ಈಗಾಗಲೇ ನಿಯೋಜಿಸಿರುವ ಗಣತಿದಾರರು ತಮ್ಮ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುವ ಮನೆಗಳಿಗೆ ತೆರಳಿ ಮಾಹಿತಿ ಪಡೆದು ಸಮೀಕ್ಷೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಸೂಚಿಸಿದ ಅವರು, ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಗೆ ನಿರ್ಲಕ್ಷ್ಯ ವಹಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗಣತಿದಾರರ ಜೊತೆ ಮೇಲ್ವಿಚಾರಕರು ಸಹ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡು ಸಮೀಕ್ಷೆಯ ಪ್ರಗತಿ ಸಾಧಿಸಬೇಕು. ಪರಿಶಿಷ್ಟ ಜಾತಿ ಕುಟುಂಬ ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ಗಮನಹರಿಸಬೇಕು. ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಹಿತಿ ತುಂಬಬೇಕು. ಇದು ಸರಳ ವಿಧಾನವಾಗಿದ್ದು, ಆಸಕ್ತಿ ವಹಿಸಿದಲ್ಲಿ ಸುಗಮವಾಗಿ ಹಾಗೂ ಸುಲಲಿತವಾಗಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ವಹಿಸಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಜೊತೆಗೂಡಿ ಇಡೀ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಸಂಬಂಧಿಸಿದಂತೆ ಮೇಲ್ವಿಚಾರಣೆ ವಹಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮೇ೧೭ ರವರೆಗೆ ನಡೆಯುವ ಮನೆ ಮನೆ ಸಮೀಕ್ಷೆ ಸಂಬಂಧ ಸಂಪೂರ್ಣ ಪ್ರಗತಿ ಸಾಧಿಸಬೇಕು. ಸಮಗ್ರ ಸಮೀಕ್ಷೆ ಸಂಬಂಧಿಸಿದಂತೆ ಪ್ರತೀ ನಿತ್ಯ ತಾಲ್ಲೂಕುವಾರು ಮಾಹಿತಿ ಒದಗಿಸುವಂತೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯ ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾತನಾಡಿ, ಪರಿಶಿ?್ಟ ಜಾತಿಯ ಕುಟುಂಬಗಳ ಸಮೀಕ್ಷೆಗಾಗಿ ಮನೆಮನೆಗೆ ತೆರಳುತ್ತಿರುವ ಗಣಿತಿದಾರರಿಗೆ ಸಂಬಂಧಪಟ್ಟ ಮತಗಟ್ಟೆಗಳ ಮತಗಟ್ಟೆ ಅಧಿಕಾರಿ(ಬಿಎಲ್‌ಓ) ಗಳು ಮನೆಗಳನ್ನು ಗುರುತಿಸಲು ಸಹಕರಿಸಬೇಕು. ಸರ್ಕಾರದ ನಿರ್ದೇಶನದಂತೆ ಸಮೀಕ್ಷೆ ಮಾಡಬೇಕಿದ್ದು, ಆ ಹಿನ್ನೆಲೆಯಲ್ಲಿ ಈಗಾಗಲೇ ಬೂತ್‌ಮಟ್ಟದಲ್ಲಿ ನಿಯೋಜಿಸಿರುವ ಗಣತಿದಾರರು ಪರಿಶಿಷ್ಟ ಜಾತಿ ಕುಟುಂಬದವರ ಮನೆ ಮನೆಗೆ ತೆರಳಿ ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು. ಜಾತಿ, ಉಪಜಾತಿ ಮತ್ತು ಮೂಲ ಉಪಜಾತಿ ನಮೂದು ಮಾಡಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲೂ ಸಹ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಪರಿಶಿಷ್ಟ ಜಾತಿಯವರ ಬಡಾವಣೆಯಲ್ಲಿ ಸಮೀಕ್ಷೆ ಕೈಗೊಳ್ಳುವಂತಾಗಲು ಸಹಕರಿಸಬೇಕು. ಯಾವುದೇ ಕಾರಣದಿಂದ ಪರಿಶಿಷ್ಟ ಜಾತಿ ಕುಟುಂಬಗಳು ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ನಟರಾಜು, ತಹಶೀಲ್ದಾರರು, ತಾ.ಪಂ.ಇಒಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net