

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ (ಮೇಲ್ಸೇತುವೆ)ಗಾಗಿ ಭೂಸ್ವಾಧೀನ ಪ್ರಕ್ರಿಯೆ ಜರುಗಿಸಲು ಗುರುವಾರ ಸರ್ವೆ ಕಾರ್ಯ ಆರಂಭಿಸಲಾಯಿತು.
ಹುಬ್ಬಳ್ಳಿ ನಗರ ಮಾಪನ ಕಚೇರಿಯ ಸರ್ವೆಯರ್ಗಳು ಹೊಸೂರು ಗಾಳಿ ದುರ್ಗಮ್ಮ ದೇವಸ್ಥಾನ ಹಿಂಭಾಗ ಹಾಗೂ ಗೋಕುಲ ರಸ್ತೆ ದಿ ಫೆರ್ನ್ ರೆಸಿಡೆನ್ಸಿವರೆಗೆ ಸರ್ವೆ ನಡೆಸಲಾಗಿದೆ. ಫ್ಲೈ ಓವರ್ನ ಪಿಲ್ಲರ್ ಮಧ್ಯದಿಂದ ಅಕ್ಕ ಪಕ್ಕ ಭೂ ಸ್ವಾಧೀನಕ್ಕೆ ಒಳಪಡುವ ಆಸ್ತಿಗಳನ್ನು ಮಾರ್ಕಿಂಗ್ ಮಾಡಲಾಗಿದೆ.
‘ಒಂದೆರಡು ಕಡೆ ಆಸ್ತಿ ಮಾಲೀಕರು ತಕರಾರು ಮಾಡಿದ್ದು ಬಿಟ್ಟರೆ, ಸರ್ವೆ ಕಾರ್ಯಕ್ಕೆ ಬಹುತೇಕರು ಸಹಕಾರ ನೀಡಿದ್ದಾರೆ. ಭೂ ಸ್ವಾಧೀನಕ್ಕೆ ಒಳಪಡುವ ರಸ್ತೆ ಭಾಗ ಎಷ್ಟು ಹಾಗೂ ಸಾರ್ವಜನಿಕ ಆಸ್ತಿಯ ಪಾಲು ಎಷ್ಟು ಎಂಬುದು ನಿಖರವಾಗಿ ಲೆಕ್ಕ ಹಾಕಲಾಗುವುದು. ಶುಕ್ರವಾರ ಹೊಸೂರಿನಿಂದ ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಕೆನರಾ ಹೋಟೆಲ್ವರೆಗೆ ಸರ್ವೆ ಕಾರ್ಯ ನಡೆಯಲಿದೆ. ಶನಿವಾರವೂ ಮುಂದುವರಿಯಲಿದೆ’ ಎಂದು ನಗರ ಮಾಪನ ಕಚೇರಿ ತಿಳಿಸಿದೆ.
966 ಆಸ್ತಿಗಳು :
ಹುಬ್ಬಳ್ಳಿಯ ಹೃದಯಭಾಗ ರಾಣಿ ಚನ್ನಮ್ಮ ವೃತ್ತವನ್ನು ಕೇಂದ್ರವಾಗಿರಿಸಿಕೊಂಡು 294 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯು 3 ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿಕೊಂಡಿದೆ. ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಭೂ ಸ್ವಾಧೀನ ಪ್ರಕ್ರಿಯೆಗೆ ಜೂನ್ 1ರಂದು ಅಧಿಸೂಚನೆ ಹೊರಡಿಸಿತ್ತು. ಇದರನ್ವಯ 12.26 ಹೆಕ್ಟರ್ (1,22,657 ಚದರ ಮೀಟರ್) ವಿಸ್ತೀರ್ಣದ ಪ್ರದೇಶವನ್ನು ಗುರುತಿಸಲಾಗಿದ್ದು, 966 ಆಸ್ತಿಗಳು ಭೂಸ್ವಾಧೀನಕ್ಕೆ ಒಳಪಡಲಿದೆ ಎಂದು ಅಂದಾಜಿಸಲಾಗಿದೆ.