ಸಮೀಕ್ಷೆ: ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರ ನಿರ್ಧಾರ

ashakaryakarthe
Published on

ಮಡಿಕೇರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ೨೦೨೫ರಲ್ಲಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕೊಡಗು ಜಿಲ್ಲಾ ಸಮಿತಿ ಭಾಗವಹಿಸದಿರಲು ನಿರ್ಧಾರ ಕೈಗೊಂಡಿದೆ.

ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ಗ್ಯಾರಂಟಿ ಯೋಜನೆ ಸೇರಿದಂತೆ ಈ ಹಿಂದೆ ನಡೆಸಿದ ಸಮೀಕ್ಷೆಗಳ ಹಣವನ್ನು ರಾಜ್ಯ ಸರ್ಕಾರ ಇನ್ನೂ ಪಾವತಿ ಮಾಡಿಲ್ಲ. ಹೀಗಾಗಿ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮಾ ಬಸಪ್ಪ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಅನುಮೋದನೆ ನೀಡಿ ಆದೇಶಿಸಿದೆ. ಅಲ್ಲದೇ ಇದಕ್ಕಾಗಿ ೨೦೦೦ ರೂ. ಗೌರವಧನ ನಿಗದಿಗೊಳಿಸಲಾಗಿದೆ. ಆದರೆ, ಸಮೀಕ್ಷೆ ವೇಳೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು ವಿತರಿಸುವುದು, ಅರಿವು ಮೂಡಿಸುವುದು ಅಲ್ಲದೆ ಮೊಬೈಲ್ ಅಪ್ಲಿಕೇಶನ್ ಜಾಗೃತಿ ಅಪ್ ಮೂಲಕ ಕೆಲಸ ನಿರ್ವಹಿಸಲು ತಿಳಿಸಲಾಗಿದೆ.

ಕೊಡಗು ಗುಡ್ಡಗಾಡು ಪ್ರಾದೇಶವಗಿರುವುದರಿಂದ ಸ್ಥಳೀಯವಾಗಿ ಮಾಡುವ ಆರೋಗ್ಯ ಇಲಾಖೆಯ ಕೆಲಸಗಳಿಗೆ ತೊಂದರೆಯಾಗಲಿದೆ. ಈ ಹಿಂದೆ ನಡೆಸಿದ ವಿವಿಧ ಸಮೀಕ್ಷೆಗಳ ಹಣ ಇನ್ನೂ ಪಾವತಿಸಿಲ್ಲ. ಅಲ್ಲದೆ ಹಲವಾರು ಘೋಷಿತ ಭರವಸೆಗಳು ಬಹುದಿನಗಳಿಂದ ಹಾಗೆಯೇ ಉಳಿದಿದ್ದು, ಸರ್ಕಾರದಿಂದ ಇವುಗಳಿಗೆ ಸ್ಪಷ್ಟ ಆದೇಶಗಳು ಸಿಗಬೇಕು. ಹೀಗಾಗಿ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸದಿರಲು ಆಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಮನವಿ ನೀಡುವ ಸಂದರ್ಭ ಆಶಾ ಕಾರ್ಯಕರ್ತೆಯರಾದ ಎಂ.ಯಶೋಧ ಕುಮಾರಿ, ಎನ್.ಶ್ರೀಮತಿ, ಟಿ.ಎಸ್.ಸ್ವಾತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net