

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯು ಶೇ.87.31 ಪ್ರಗತಿ ಸಾಧಿಸಿದೆ.
2024-25 ನೇ ಸಾಲಿಗೆ ಅಂದಾಜಿಸಿದಂತೆ ಅಂಕಿಅಂಶಗಳ ವರದಿ ಪ್ರಕಾರ ಜಿಲ್ಲೆಯಲ್ಲಿ 3,85,237 ಕಟುಂಬಗಳಿದ್ದು 12,26,357 ಜನಸಂಖ್ಯೆ ಇದೆ. ಇದುವರೆಗೆ 385237ಕುಟುಂಬಗಳ 10,70,677 ಜನರ ಸಮೀಕ್ಷೆ ನಡೆಸಲಾಗಿದೆ.
ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಸಮೀಕ್ಷೆ ಆರಂಭಗೊಂಡ ಸಮೀಕ್ಷೆ ಕಾರ್ಯ ಅ.7ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ, ಸಮೀಕ್ಷೆ ಪ್ರಮಾಣ ಕಡಿಮೆ ಆಗಿದ್ದ ಕಾರಣ ಹೆಚ್ಚಿನ ಕಾಲಾವಕಾಶ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅ.18ವರೆಗೆ ಸಮೀಕ್ಷೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಅವಧಿಯಲ್ಲಿ ಶೇ.87 ಸಾಧನೆಯಾಗಿದ್ದು ಉಳಿದ ಶೇ.13 ಸಮೀಕ್ಷೆಯನ್ನು ಪ್ರಸ್ತುತ ವಿಸ್ತರಿಸಿರುವ ಕಾಲವಾಧಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶ್ರಮವಹಿಸುತ್ತಿದೆ.
ಕೆಲವು ಡಿಲೀಟ್: ಸಮೀಕ್ಷೆ ಆರಂಭಕ್ಕೂ ಮುನ್ನ ಪ್ರತಿ ಮನೆಗೆ ಜಿಯೋ ಟ್ಯಾಗಿಂಗ್ ಕಾರ್ಯವನ್ನು ವಿದ್ಯುತ್ ಮೀಟರ್ ರೀಡರ್‌ಗಳು, ಗ್ರಾಮ ಆಡಳಿತಾಧಿಕಾರಿ ಹಾಗೂ ಇತರ ಸಿಬ್ಬಂದಿ ಪೂರ್ಣಗೊಳಿಸಿದ್ದರು. ಇಂತವುದರಲ್ಲಿ ಕೆಲವು ರೆಸಾರ್ಟ್‌ಗಳು, ತೋಟದ ಮನೆ ಸೇರಿ ವಾಸವಿಲ್ಲದ ಮನೆಗಳಿಗೂ ಜಿಯೋ ಟ್ಯಾಂಗಿಗ್ ಮಾಡಲಾಗಿದೆ. ಇದರ ಪ್ರಮಾಣ ಜಿಲ್ಲೆಯಲ್ಲಿ ಶೇ.10ರಷ್ಟಿದೆ. ಇಂತಹವುಗಳನ್ನು ದಾಖಲೆಯಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಜಿಲ್ಲೆಯಲ್ಲಿನ ಸಮೀಕ್ಷೆಯ ಸಂಕ್ಷಿಪ್ತ ವಿವರ: ಜಿಲ್ಲೆಯಲ್ಲಿ 3334 ಬ್ಲಾಕ್ ಗುರುತಿಸಲಾಗಿತ್ತು. ಇದರಲ್ಲಿ ಒಟ್ಟು 3,85,237 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿವ ಗುರಿ ಹೊಂದಲಾಗಿತ್ತು. ಅಂದಾಜು 12,26,357ಮಂದಿ ಸಮೀಕ್ಷೆಗೆ ಒಳಪಡಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ಒಟ್ಟಾರೆ 3,85,237ಕುಟುಂಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, 10,70,677ಮಂದಿ ಸಮೀಕ್ಷಾ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ದೇವನಹಳ್ಳಿಯಲ್ಲಿ 667 ಬ್ಲಾಕ್ ನಿಗಧಿಯಾಗಿದ್ದು 76059 ಕುಟುಂಬಗಳ ಸಮೀಕ್ಷೆಯ ಗುರಿ ನೀಡಲಾಗಿದೆ. ಇದರಲ್ಲಿ 64705 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ದೊಡ್ಡಬಳ್ಳಾಪುರದಲ್ಲಿ 857 ಬ್ಲಾಕ್‌ಗಳಿದ್ದು 98375 ಕುಟುಂಬಗಳ ಪೈಕಿ87863 ಕುಟುಂಬದ ಸಮೀಕ್ಷೆ ಪೂರ್ಣಗೊಂಡಿದೆ. ಹೊಸಕೋಟೆ ತಾಲೂಕಿನಲ್ಲಿ 1063 ಬ್ಲಾಕ್‌ಗಳಿದ್ದು 124036 ಕುಟುಂಬಗಳ ಪೈಕಿ 105239 ಪೂರ್ಣಗೊಂಡಿದೆ. ನೆಲಮಂಗಲ ತಾಲೂಕಿನಲ್ಲಿ 747 ಬ್ಲಾಕ್‌ಗಳಿದ್ದು 86767 ಕುಟುಂಬದ ಸಮೀಕ್ಷೆಯ ಗುರಿ ನೀಡಲಾಗಿದ್ದು ಪ್ರಸ್ತುತ 24428 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
ನಿರ್ಭೀತಿಯಿಂದ ಸಮೀಕ್ಷೆಗೆ ಸಹಕರಿಸಿ: ದತ್ತಾಂಶ ಸಂಗ್ರಹಣೆಯು ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶವಾಗಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಸಮೀಕ್ಷೆಯ ದತ್ತಾಂಶ ಗೌಪ್ಯತೆ ಕಾಪಾಡಲಿದೆ. ಜತೆಗೆ ದತ್ತಾಂಶವು ಸೋರಿಕೆ ಆಗುವುದಿಲ್ಲ. ಸಾರ್ವಜನಿಕರು ನಿರ್ಭಿತಿಯಿಂದ ಸಮೀಕ್ಷೆಗೆ ಸಹಕರಿಸಿ ಗಣತಿದಾರರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಮೀಕ್ಷೆ ಆರಂಭದಲ್ಲಿ ಸಹಜವಾಗಿ ಹಲವು ತೊಡಕುಗಳು ಎದುರಾಗಿದ್ದವು ಆದರೆ ಪ್ರಸ್ತುತ ಎಲ್ಲವೂ ಬಗೆಹರಿದಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸಮೀಕ್ಷೆ ಸುಗಮವಾಗಿ ನಡೆಯುತ್ತಿದೆ. ಪ್ರಸ್ತುತ ಶೇ.87.30 ಸಮೀಕ್ಷೆ ಪೂರ್ಣಗೊಂಡಿದ್ದು ನಿಗಧಿತ ಅವಧಿಯೊಳಗೆ ಶೇ.100 ಸಮೀಕ್ಷೆ ಪೂರ್ಣಗೊಳ್ಳುವ ವಿಶ್ವಾಸವಿದೆ ಈ ನಿಟ್ಟಿನಲ್ಲಿ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸುತ್ತಿದ್ದು ಜಿಲ್ಲಾಡಳಿತ ಸಹಕಾರ ನೀಡುತ್ತಿದೆ.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
-----------
ಸಮೀಕ್ಷೆ ಕುರಿತಂತೆ 6 ಸಾವಿರ ಸ್ವಸಹಾಯ ಗುಂಪುಗಳ ಮಹಿಳೆಯರಿಂದ ಗ್ರಾಮಗಳಲ್ಲಿ ಅರಿವು ಮೂಡಿಸಲಾಗಿದೆ, ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತಾ ವಾಹಿನಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಬಾಕಿ ಉಳಿದಿರುವ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ಸಮೀಕ್ಷೆ ಯಶಸ್ಸಿಗೆ ಸಹಕರಿಸಬೇಕು.
ಲಕ್ಷ್ಮಿಕಾಂತ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ