

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ಟೌನ್‌ನ ಹಳೇ ಬಸ್ ನಿಲ್ದಾಣ ಸರೋವರ ಬೀದಿಯ 6ನೇ ವಾರ್ಡ್‌ನಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಖುದ್ದು ಮನೆಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಮ್ಮ ಸಮೀಕ್ಷೆದಾರರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿ, ಯಾವುದೇ ಕಾರಣಕ್ಕೂ ಮಾಹಿತಿ ನೀಡಲು ಹಿಂಜರಿಯಬೇಡಿ. ಸಮೀಕ್ಷೆಗೆ ಬಗೆಗಿನ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಮೀಕ್ಷೆಗೆ ಆಧಾರ್‌ಕಾರ್ಡ್ ಕಡ್ಡಾಯವಾಗಿದ್ದು, ಇನ್ನೂ ಆಧಾರ್‌ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲದವರು ಶೀಘ್ರವಾಗಿ ಲಿಂಕ್ ಮಾಡಿಕೊಳ್ಳಬೇಕು. ಹಾಗೇ ಅಗತ್ಯ ದಾಖಲೆಗಳಿಗೆ ಕೆವೈಸಿ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು ಇ-ಕೈವೈಸಿ ಮಾಡಿಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಸಮೀಕ್ಷೆ ಮಾಡುವ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಕೆಲವೊಂದು ಸಂದರ್ಭಗಳಲ್ಲಿ ಉಂಟಾಗುತ್ತದೆ, ಸಾರ್ವಜನಿಕರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸಮರ್ಪಕವಾದ ಮಾಹಿತಿ ನೀಡಿ ಗಣತಿದಾರರಿಗೆ ಸಹಕರಿಸಿ ಎಂದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗಾಗಿ ಜಿಲ್ಲೆಯಲ್ಲಿ 3286 ಗಣತೀದಾರರನ್ನು 194 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಸೆ. 22 ರಿಂದ ಸಮೀಕ್ಷಾ ಕಾರ್ಯ ಹಮ್ಮಿಕೊಂಡಿದ್ದು ಇದಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಿಬ್ಬಂದಿ ಹಾಗೂ ತರಬೇತಿ ನೀಡಲಾಗಿದೆ. ಸಾರ್ವಜನಿಕರು ಸಿಬ್ಬಂದಿಯೊಂದಿಗೆ ಸಹಕರಿಸುವ ಮೂಲಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಸಿಇಒ ಮನವಿ ಮಾಡಿದರು.
ಸಾರ್ವಜನಿಕರು ಕೈಜೋಡಿಸಬೇಕು: ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಸಾರ್ವಜನಿಕರು ಆಧಾರ್‌ಕಾರ್ಡ್ ಇ-ಕೈವೈಸಿ ಕಡ್ಡಾಯವಾಗಿ ಮಾಡಿರಬೇಕು, ಇ-ಕೆವೈಸಿ ಮಾಡಿರುವ ಆಧಾರ್‌ಕಾರ್ಡ್‌ನ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಇ-ಕೆವೈಸಿ ಮಾಡಿಸದವರು ಹತ್ತಿರದ ಗ್ರಾಮ ಒನ್ ಸೆಂಟರ್‌ಗಳಿಗೆ ಭೇಟಿ ನೀಡಿ ಇ- ಕೆವೈಸಿ ಮಾಡಿಸಿಕೊಳ್ಳಬೇಕು, ಇದರಿಂದ ಸಮೀಕ್ಷೆಗೆ ದತ್ತಾಂಶ ಸಂಗ್ರಹಿಸಲು ಅನುಕೂಲವಾಗಲಿದೆ ಗಣತೀದಾರರು ಕೇಳುವಂತಹ ಪ್ರಶ್ನೆಗಳಿಗೆ ಸಾರ್ವಜನಿಕರು ಸರಿಯಾಗಿ ಸಮರ್ಪಕ ಉತ್ತರ ನೀಡಿ ಸಮೀಕ್ಷೆ ಯಶಸ್ಸಿಗೆ ಸಹಕರಿಸಬೇಕು, ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ದೇವನಹಳ್ಳಿ ತಾಲೂಕು ಇಒ ಶ್ರೀನಾಥ್‌ಗೌಡ ತಿಳಿಸಿದರು.
ರಾಜ್ಯದ ಅಭಿವೃದ್ಧಿಗೆ ಪೂರಕ: ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿ, ಜಾತಿ, ಉಪಜಾತಿ, ಕೌಶಲ ಅಗತ್ಯತೆಗಳು ಮತ್ತು ಇತರೆ ಸಾಮಾಜಿಕ ಅಂಶಗಳನ್ನು ದಾಖಲಿಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಧಾರವನ್ನು ಸೃಷ್ಟಿಸುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಈ ದತ್ತಾಂಶ ಸಂಗ್ರಹಣೆಯು ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸಲಿದೆ. ಆದ್ದರಿಂದ ಗಣತೀದಾರರು ಮನೆಗಳ ಬಳಿ ಬಂದಾಗ ಅವರು ಕೇಳಿದ ದಾಖಲೆಗಳನ್ನು ನೀಡಿ ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಸಹಾಯವಾಣಿ ಸಂಪರ್ಕಿಸಿ:
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿ ಜಿಲ್ಲೆಯಲ್ಲಿ 5 (ಹೆಲ್ಪ್‌ಲೈನ್) ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತವೆ. ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿ ದೂರವಾಣಿ ಸಂಖ್ಯೆ 080-22449999, ದೇವನಹಳ್ಳಿ-9036858653, ದೊಡ್ಡಬಳ್ಳಾಪುರ-8884579990, ಹೊಸಕೋಟೆ-080-27931104, ನೆಲಮಂಗಲ-9740100884. ಸಮೀಕ್ಷೆಯ ಕುರಿತು ಏನಾದರೂ ಸಂದೇಹಗಳಿದ್ದಲ್ಲಿ ಸಹಾಯವಾಣಿಯನ್ನು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ್ ಮಾಹಿತಿ ನೀಡಿದ್ದಾರೆ.