

ಹಂಸಭಾವಿ: ಲಿಂಗ, ವರ್ಣ ಮತ್ತು ವರ್ಗಗಳಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಶರಣರು ಸಮ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ಹಿರೇಕೆರೂರ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ಹೇಳಿದರು.
ಸ್ಥಳೀಯ ಶಿವಯೋಗೀಶ್ವರ ಆಶ್ರಮದಲ್ಲಿ ಹಿರೇಕೆರೂರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಸಾಪ ಹಂಸಭಾವಿ ಹೋಬಳಿ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರಾವಣ ಸಂಜೆ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನೂತನ ಶಾಸಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ವಚನ ಅನ್ನುವ ವಿಶಿಷ್ಟ ಸಾಹಿತ್ಯ ರೂಪ ಬಳಸುವ ಮೂಲಕ ಸರಳ ಭಾಷೆಯಲ್ಲಿ ಜನರಿಗೆ ವೈಚಾರಿಕತೆಯನ್ನು ಬಿತ್ತುವ ಕೆಲಸವನ್ನು ಶರಣರು ಮಾಡಿದರು. ವರ್ಗ ಸಮಾನತೆಯನ್ನು ತರುವ ಮೂಲಕ ಆರ್ಥಿಕವಾಗಿ ಜನರನ್ನು ಸಬಲರನ್ನಾಗಿ ಮಾಡುವ ಉದ್ದೇಶ ಶರಣರದಾಗಿತ್ತು ಎಂದರು.
ಅಭಿನಂದನಾ ಸನ್ಮಾನ ಸ್ವೀಕರಿಸಿದ ಶಾಸಕ ಯು.ಬಿ. ಬಣಕಾರ.ಮಾತನಾಡಿ, ನಾಡು ನುಡಿಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಮುತುವರ್ಜಿಯಿಂದ ನಾಡ ಹಬ್ಬಗಳನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆಸಲಾಗುವುದು. ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಹಿತ್ಯ ಪರಿಷತ್ನವರು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ, ಗೌರವ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಇಟಗಿ, ಕರವೇ ರಾಜ್ಯ ಸದಸ್ಯ ಕರಬಸಯ್ಯಾ ಬಸರಿಹಳ್ಳಿಮಠ, ಬಾಬಣ್ಣ ಬೆಳವಿಗಿ, ರಾಜಶೇಖರ ಪಾಟೀಲ, ರಾಮಣ್ಣ ತೆಂಬದ, ಬಿ.ಐ. ಲೆಕ್ಕಪ್ಪಳವರ, ಮೃತ್ಯುಂಜಯ ಕೆಂಬಿ, ಪಿ.ಎಸ್. ಸಾಲಿ, ಬಿ.ಎಸ್. ಪಾಟೀಲ, ಪಿ.ಬಿ. ನಿಂಗನಗೌಡ್ರ, ಸಿ.ಬಿ. ಮಾಳಗಿ, ಎಸ್.ಎಸ್. ನರಗುಂದಮಠ, ಆರ್.ಟಿ. ಬಣಕಾರ, ಬಿ.ಟಿ. ಚಿಂದಿ, ಇತರರು ಉಪಸ್ಥಿತರಿದ್ದರು.
ಕಸಾಪ ತಾಲೂಕಾಧ್ಯಕ್ಷ ಎನ್. ಸುರೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಹಂಸಭಾವಿ ಹೋಬಳಿ ಘಟಕದ ಅಧ್ಯಕ್ಷ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಅಧ್ಯಕ್ಷತೆ ವಹಿದ್ದರು. ಪ್ರತೀಕ್ಷಾ ಹಾಲೇವಾಡಿಮಠ, ಡಾ. ಎಸ್. ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.