

ಶಿರಸಿ: ದೇವರಲ್ಲಿ ಸಂಪೂರ್ಣ ಶರಣಾಗತಿಯಿಂದ ಭಯ ನಿವಾರಣೆಯಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸೋಂದಾ ಕಸಬಾ, ಮತ್ತಿಘಟ್ಟ ಸೀಮೆಯ ಶಿಷ್ಯರಿಂದ ಭಾನುವಾರ ಚಾತುರ್ವಸ್ಯ ಸೇವೆ ಸ್ವೀಕರಿಸಿ ಅವರು ಮಾತನಾಡಿದರು.
ಭಗವಂತನ ಸಂದೇಶಗಳು ಎಲ್ಲವೂ ಒಂದೇ ಕಡೆ ಸಿಗುವುದು. ನಮ್ಮ ಎಲ್ಲ ಪ್ರವೃತ್ತಿ ನಿವೃತ್ತಿಗಳಿಗೆ ಶಾಸ್ತ್ರವೇ ಪ್ರಮಾಣ. ಭಗವದ್ಗೀತೆಯಲ್ಲಿ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎನ್ನುವ ನಿರ್ಣಯ ನಮ್ಮ ಶಾಸ್ತ್ರಗಳಲ್ಲಿ ಸಿಗುತ್ತವೆ. ಅದೇ ಪರಮ ಪ್ರಮಾಣ. ಇದು ಭಗವಂತನ ಪ್ರಮುಖ ಸಂದೇಶಗಳಲ್ಲಿ ಒಂದು ಎಂದರು.
ನಮ್ಮ ಎಲ್ಲರ ಸ್ವಭಾವದಲ್ಲಿ ಕಾಮ, ಕ್ರೋಧ, ಲೋಭಗಳು ಇರುತ್ತವೆ. ಅವುಗಳಿಗೆ ವಶನಾಗಿ ಮನುಷ್ಯ ತಪ್ಪುಗಳನ್ನು ಮಾಡುತ್ತ ಇರುತ್ತಾನೆ. ಈ ಮೂರು ಪಾಶಗಳಿಗೆ ಒಳಗಾಗಿ ಶಾಸ್ತ್ರಗಳ ಮಿತಿ ಮೀರುತ್ತಿರುತ್ತಾನೆ. ಶಾಸ್ತ್ರ ವಿಧಿಯನ್ನು ಕೈಬಿಟ್ಟು ಬೇರೆ ಕಡೆ ಹೋಗುತ್ತಾರೆ. ವ್ಯಕ್ತಿಯು ತನ್ನ ಮನಸಿಗೆ ಬಂದಂತೆ ಮಾಡುತ್ತ ಹೋದರೆ ಅವನಿಗೆ ನೆಮ್ಮದಿ, ಸುಖ ಇರುವುದಿಲ್ಲ. ಅವನಿಗೆ ಪರಲೌಕಿಕ ಸ್ಥಿತಿಗಳು ಲಭಿಸುವುದಿಲ್ಲ. ಇಲ್ಲಿ ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ವಿಷಯದಲ್ಲಿ ಗಟ್ಟಿ ನಿಲುವು ಬೇಕು. ಭಗವದ್ಗೀತೆಯ ಅತ್ಯಂತ ಪ್ರಮುಖ ಸಂದೇಶಗಳಲ್ಲಿ ಇದು ಒಂದು ಎಂಬುದನ್ನು ಶ್ರೀಕೃಷ್ಣ ಒತ್ತಿ ಹೇಳಿದ್ದಾನೆ ಎಂದರು.
ಮನೆಯ ವಾತಾವರಣಗಳಲ್ಲಿ ಇರುವವರಿಗೆ ಆಲಸ್ಯ, ಬೇಸರ, ಸಿಟ್ಟು, ಈ ತರಹದ ಸೆಳೆತಗಳಿಗೆ ಮನಸು ಒಳಗಾಗುತ್ತವೆ. ಗೃಹಸ್ಥರಿಗೆ ಜವಾಬ್ದಾರಿಗಳು ಇರುವುದರಿಂದ ಈ ರೀತಿಯ ಬೇಸರದ ಸಂದರ್ಭಗಳು ಬರುತ್ತವೆ. ಆದರೆ, ಅದು ನಮ್ಮ ಕೆಲಸಕ್ಕೆ ತೊಡಕನ್ನು ಉಂಟು ಮಾಡದ ರೀತಿಯಲ್ಲಿ ನೋಡಿಕೊಳ್ಳಬೇಕು. ನಮ್ಮ ಕೆಲಸದಲ್ಲಿ ಹಾಗೆ ಬರಬಾರದು. ದೇವರಲ್ಲಿ ಶರಣಾಗತಿ ಎಂಬುದು ಪ್ರತಿಯೊಬ್ಬನಿಗೆ ಬೇಕು. ವ್ಯಾವಹಾರಿಕ ನಿರ್ಭಯಗಳು ತಾತ್ಕಾಲಿಕ. ಆದರೆ, ಪಾರಮಾರ್ಥಿಕವಾಗಿ ನಿರ್ಭೀತ ಸ್ಥಿತಿ ಉಂಟಾಗಬೇಕು ಎಂದರು.
ಅವರವರ ಯೋಗ್ಯತೆಗೆ ತಕ್ಕನಾಗಿ ಎಷ್ಟೇ ನಾವು ಓದಿಕೊಂಡು ತಿಳಿದುಕೊಂಡಿದ್ದರೂ, ಅನುಭವದ ಹಂತ ಬೇರೆಯೇ ಇರುತ್ತದೆ. ಅನುಭವದ ಎತ್ತರದ ಸ್ಪಷ್ಟ ಉಲ್ಲೇಖ ಭಗವದ್ಗೀತೆಯಲ್ಲಿ ಬಂದಿದೆ. ದೇವರನ್ನು ನೋಡಬಹುದು ಎಂಬುದನ್ನು ಸ್ಪಷ್ಟವಾಗಿ ತೋರಿಸುವುದು ಭಗವದ್ಗೀತೆ. ವಿಶ್ವರೂಪ ದರ್ಶನ ಅಧ್ಯಾಯ ಜಿಜ್ಞಾಸುಗಳಿಗೆ ಅತ್ಯಂತ ಆಕರ್ಷಕವಾದ ಸಂಗತಿಗಳನ್ನು ಒದಗಿಸುತ್ತದೆ. ಅಂತಹ ಭಗವದ್ಗೀತೆಯನ್ನು ನಾವೆಲ್ಲರೂ ಅಧ್ಯಯನ ಮಾಡಿ ನಮ್ಮ ಏಳಿಗೆ ಕಂಡುಕೊಳ್ಳಬೇಕು ಎಂದರು.
ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೀಮೆಯ ವೆಂಕಟರಮಣ ಹೆಗಡೆ, ಶ್ರೀಕಾಂತ ಹೆಗಡೆ ಇತರರು ಇದ್ದರು. ಹತ್ತನೇ ತರಗತಿಯಲ್ಲಿ 95 ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮಾತೆಯರು ಸ್ತೋತ್ರ, ಕುಂಕುಮಾರ್ಚನೆಗಳನ್ನು ಮಾಡಿದರು. ಮಹನೀಯರು ಗಾಯಿತ್ರಿ ಅನುಷ್ಠಾನ ಮಾಡಿದರು.