

ಕುಮಟಾ: ಭಗವಂತನಲ್ಲಿ ಶರಣಾಗತಿಯಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ. ನಾವು ಕೇವಲ ಪಾತ್ರಧಾರಿಗಳಾಗಿ ಕರ್ತವ್ಯವನ್ನು ನಿರ್ವಹಿಸಬೇಕು. ಬದುಕಿನ ಪ್ರವಾಸದಲ್ಲಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಅನೇಕ ಪಾತ್ರಗಳು ಬಂದು ಹೋಗಿ ಕೊನೆಯಲ್ಲಿ ಪ್ರವಾಸ ನಿಲ್ಲುತ್ತದೆ. ಅಷ್ಟರಲ್ಲಿ ಕರ್ಮ ಮತ್ತು ಭಕ್ತಿ ಮಾರ್ಗದ ಮೂಲಕ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.
ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತನಿರತ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮೀಜಿ ಹೊನ್ನಾವರದ ಚಿಕ್ಕನಕೋಡ, ಹಡಿನಬಾಳ ಗ್ರಾಪಂ ಭಕ್ತಕೂಟದಿಂದ ಗುರು ಸೇವೆ ಸ್ವೀಕರಿಸಿ, ಆಶೀರ್ವಚನ ನೀಡಿದರು.
ಯಾವುದೇ ಸ್ಥಾನಮಾನ ದೊರೆತರೂ ಕರ್ತವ್ಯವನ್ನು ಬಿಡಬಾರದು. ನಮ್ಮೊಳಗೆ ಅಹಂಕಾರ ನುಸುಳದಂತೆ ಜಾಗೃತವಾಗಿದ್ದು ಸತ್ಕಾರ್ಯ ಮಾಡಬೇಕು. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸ್ಥಾನಮಾನದ ಸದ್ವಿನಿಯೋಗ ಮಾಡಬೇಕು ಎಂದರು.
ಹೊನ್ನಾವರ ತಾಲೂಕಿನ ಚಿಕ್ಕನಕೋಡ ಹಾಗೂ ಹಾಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಆರ್.ಪಿ. ನಾಯ್ಕ ದಂಪತಿ ಚಿಕ್ಕನಕೋಡ, ಹರಿಯಪ್ಪ ವಾಮನ ನಾಯ್ಕ ದಂಪತಿ ಹುಡಗೋಡ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚಿಕ್ಕನಕೋಡ, ಹಡಿನಬಾಳ, ಹುಡಗೋಡ ಗುರುಸೇವೆಗೈದರು. ಹುಬ್ಬಳ್ಳಿ ಬಿಲ್ಲವ ಸಂಘದ ಪ್ರಮುಖರಾದ ಕೃಷ್ಣೆ ಬೈರೇ ಗೌಡ್ರು, ಆನಂದ ಪೂಜಾರ ಹಾಗೂ ಉದ್ಯಮಿ ಸತೀಶ ನಾಯ್ಕ ಶ್ರೀಗಳ ಆಶೀರ್ವಾದ ಪಡೆದರು.