ಶರಣ ಸಮಾಜದ ಶಾಂತಿ ಕದಡುವ ಕೃತಿ ವಚನ ದರ್ಶನ

21 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶರಣ ಸಮಾಜದ ಶಾಂತಿ, ಸ್ವಾಸ್ಥ್ಯ ಹಾಳು ಮಾಡುವ ಕೃತಿ ವಚನ ದರ್ಶನ. ಈ ಕೃತಿಯನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಬೇಕು ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಪುಣೆ ಘಟಕದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯಾ ಪ್ರಕಾಶನದವರು ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ವಚನ ದರ್ಶನ ಕೃತಿಯು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ. ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡುಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ವಚನ ದರ್ಶನ ಕೃತಿ ರಚಿಸಿದ್ದಾರೆ ಎಂದರು.
ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕ ಮಾರಾಟ ಮಾಡುತ್ತಿದ್ದಾರೆ. ವಚನ ಚಳವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿ ಬಿಂಬಿಸುವ ವಚನ ದರ್ಶನವು, ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯ. ಸಾರ್ವಕಾಲಿಕ ಸಮಾನತೆ, ಶಾಂತಿ, ಪ್ರೀತಿ, ಸಮ ಬಾಳು, ಸಮಪಾಲು ಎನ್ನುವ ಶ್ರೇಷ್ಠ ಧ್ಯೇಯ ಹೊಂದಿದ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ವಚನ ದರ್ಶನವನ್ನು ಕೂಡಲೇ ಮುಟ್ಟುಗೋಲು ಹಾಕಬೇಕು ಎಂದರು.
ಬವಣ್ಣನವರ ವಚನ, ಫ .ಗು. ಹಳಕಟ್ಟಿ ಕುರಿತು ಸಾಕಷ್ಟು ತಪ್ಪು ಮಾಹಿತಿ ನೀಡಲಾಗಿದೆ. ಇಂತಹ ಕೃತಿ ಮುಟ್ಟುಗೋಲು ಹಾಕುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಸವಪರ ಸಂಘಟನೆಗಳಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಸವ ಕೇಂದ್ರದ ಅಧ್ಯಕ್ಷ ಸಿದ್ರಾಮಣ್ಣ ನಡಕಟ್ಟಿ, ಜಿ.ವಿ. ಕೊಂಗವಾಡ, ಶೇಖರ ಕುಂದಗೋಳ, ಉಮೇಶ ಕಟಗಿ, ಎಂ.ಎಸ್​. ಸಿರಿಯಣ್ಣವರ, ಶಿವರುದ್ರಗೌಡ ಕುಂದರಗಿ, ಜಯಶ್ರೀ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net