ಸ್ತ್ರೀಗೆ ಗೌರವದ ಸ್ಥಾನ ತಂದು ಕೊಟ್ಟ ಶರಣರು

2 hbv 1 SHARANARU
Published on

ಹಂಸಭಾವಿ: ಹೆಣ್ಣು ಕೇವಲ ಭೋಗದ ವಸ್ತು, ಅಲಂಕಾರದ ಗೊಂಬೆ ಮಕ್ಕಳನ್ನು ಹೇರುವ ಯಂತ್ರವೆಂದು ಸ್ತ್ರೀಗೆ ಸ್ವಾತಂತ್ರ್ಯ ನೀಡದೆ ಅಡುಗೆ ಮನೆಗೆ ಸೀಮಿತಗೊಳಿಸಿದ್ದ ಕಾಲ ಒಂದಿತ್ತು. 12ನೇ ಶತಮಾನದ ಶರಣರು ಸ್ತ್ರೀಗೆ ಸ್ವಾತಂತ್ರ್ಯ ನೀಡಿ ಅವಳಿಗೆ ಸಮಾಜದಲ್ಲಿ ಗೌರವದ ಸ್ಥಾನ ತಂದು ಕೊಟ್ಟರು. ಇಂದು ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ಶಿವಯೋಗೀಶ್ವರ ಆಶ್ರಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಜ್ಜಲಗುಡ್ಡದ ಶಿವಶರಣೆ ಪುರಾಣ ಮಂಗಲೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹತ್ತಿಮತ್ತೂರಿನ ಶ್ರೀ ನಿಜಗುಣ ಶಿವಯೋಗಿ ಮಹಾಸ್ವಾಮೀಜಿ ಮಾತನಾಡಿ, ಧರ್ಮ-ಧರ್ಮಗಳ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ಸಂಘರ್ಷಗಳು ಮನುಕುಲದ ಅವನತಿಗೆ ಕಾರಣವಾಗಬಹುದು. 12ನೇ ಶತಮಾನದ ಶರಣರು ಸಂಘರ್ಷಗಳನ್ನು ದೂರಮಾಡಿ ಸಾಮರಸ್ಯದಿಂದ ಬಾಳಲು ದಾರಿ ತೋರಿಸಿದರು. ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಅಗಡಿ ಮತ್ತು ಗುತ್ತಲದ ಗುರುಸಿದ್ಧ ಮಹಾಸ್ವಾಮೀಜಿ ಮತ್ತು ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮೀಜಿ ಆಶಿರ್ವಚನ ನೀಡಿದರು. ಶಿವಯೋಗೀಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಪುರಾಣ ಮಂಗಲ ನುಡಿದರು.

ದಾನೇಶ್ವರಿ ಭಜನಾ ಸಂಘದವರು ಪ್ರಾರ್ಥಿಸಿದರು. ಮಲ್ಲೇಶಪ್ಪ ಅಸುಂಡಿ ಸಂಗೀತ ಸೇವೆ ನೀಡಿದರು. ಎ.ಎನ್. ಹೆಡಿಯಾಲ ತಬಲಾ ಸಾಥ್ ನೀಡಿದರು. ಜಿ.ಆರ್. ಕೆಂಚಕ್ಕನವರ, ಷಣ್ಮುಖಯ್ಯ ಮಳಿಮಠ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net