ಮಹಿಳಾ ಶಕ್ತಿಗೆ ಮಣಿದು ಮದ್ಯದಂಗಡಿಗೆ ಬೀಗ

Madya
Published on

ಬ್ಯಾಡಗಿ: ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ತಕ್ಷಣವೇ ಮದ್ಯದಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ತಾಲೂಕಿನ ತಡಸ ಗ್ರಾಮದ ನೂರಾರು ಮಹಿಳೆಯರು ಮದ್ಯದಂಗಡಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಜತೆಗೆ ಬಂದ್ ಮಾಡಿಸುವಲ್ಲಿ ಯಶಸ್ವಿಯಾದರು.

ಬೆಳಗ್ಗೆ ಅಂಗಡಿ ತೆಗೆಯುತ್ತಿದ್ದಂತೆಯೇ ಜಮಾಯಿಸಿದ ನೂರಾರು ಮಹಿಳೆಯರು ಅಂಗಡಿ ಶೆಟರ್ಸ್ ಎಳೆದರು. ‘ಇಂದಿನಿಂದ ಮದ್ಯ ಮಾರಾಟ ಬೇಡ, ಬೀಗ ಹಾಕಿಕೊಂಡು ನಡೆಯಿರಿ’ ಎನ್ನುತ್ತಿದ್ದಂತೆ, ಕಾರ್ಮಿಕ ಬಾಗಿಲಿಗೆ ಬೀಗ ಹಾಕಿ ಅಂಗಡಿಯಿಂದ ಹೊರನಡೆದ. ಬಳಿಕ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಧರಣಿ ನಡೆಸಿದರು.

ಗ್ರಾಮದ ವಿಜಯಲಕ್ಷ್ಮೀ ಮಲ್ಲಾಪುರ ಮಾತನಾಡಿ, ಗ್ರಾಮದಲ್ಲಿ ಎರಡು ವರ್ಷಗಳಿಂದ ಅನಧಿಕೃತವಾಗಿ ಮದ್ಯದ ಅಂಗಡಿ ತೆರೆಯಲಾಗಿದೆ. ಪರಿಣಾಮ ಗ್ರಾಮದಲ್ಲಿ ಕುಡುಕರ ಸಂಖ್ಯೆ ವಿಪರೀತವಾಗಿ, ಕೌಟುಂಬಿಕ ಜಗಳಕ್ಕೆ ಕಾರಣವಾಗಿದೆ. 15 ವರ್ಷದ ಬಾಲಕರೂ ಕುಡಿತದ ದಾಸರಾಗುತ್ತಿದ್ದಾರೆ. ಸಂಜೆಯಾದರೆ ಮನೆಯಿಂದ ಹೊರಬಾರದಂತಾಗಿದೆ. ಮದ್ಯದಂಗಡಿ ಬಂದ್ ಮಾಡುವಂತೆ ಹಲವು ಬಾರಿ ಅಬಕಾರಿ ನಿರೀಕ್ಷರು, ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆಗೆ ಸಿದ್ಧತೆ

ನಾಲ್ಕು ಗಂಟೆಯಾರೂ ಅಧಿಕಾರಿಗಳು ಬಾರದಿದ್ದಾಗ ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಲು ಮುಂದಾದರು. ಪರಿಸ್ಥಿತಿ ಗಂಭೀರತೆ ಅರಿತು ಅಬಕಾರಿ ನಿರೀಕ್ಷಕ ಎಂ.ಎಚ್. ತಿರುಮಲೇಶ ಅವರು ಘಟನಾ ಸ್ಥಳಕ್ಕಾಗಮಿಸಿದರು. ಈ ಹಿಂದೆ ಸಲ್ಲಿಸಿದ ಮನವಿ ಪತ್ರ ಪರಿಶೀಲನೆಯಲ್ಲಿದೆ. ಬಂದ್ ಮಾಡಲು ಮೇಲಧಿಕಾರಿಗಳ ನಿರ್ದೇಶನ ಅಗತ್ಯ. ಹೀಗಾಗಿ ಒಂದು ವಾರ ಸಮಯಾವಕಾಶ ಕೊಡಿ ಎಂದರು. ಇದಕ್ಕೊಪ್ಪದ ಮಹಿಳೆಯರು, ನಿಮ್ಮ ಸುಳ್ಳು ಭರವಸೆ ಕೇಳಿ ಸಾಕಾಗಿದೆ. ಯಾವುದೆ ಕಾರಣಕ್ಕೂ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಅಬಕಾರಿ ಇಲಾಖೆ ಮೇಲಧಿಕಾರಿಗಳ ನಿರ್ದೇಶನ ಹಾಗೂ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ತಿರುಮಲೇಶ ಅವರು ಮದ್ಯದಂಗಡಿ ಸೀಲ್ ಮಾಡಿದರು. ಮತ್ತೆ ಆರಂಭಿಸಿದರೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಮಹಿಳೆಯರು ಎಚ್ಚರಿಸಿದರು.

ಗ್ರಾಮಸ್ಥರಾದ ಚನ್ನವ್ವ ಲಮಾಣಿ, ಹೊನ್ನಮ್ಮ ಹುಲಗೂರು, ನಾಗಮ್ಮ ಮಲ್ಲಾಪುರ, ಶಾಂತಮ್ಮ ಮಲ್ಲಾಪುರ, ಬಸವಣ್ಣೆಮ್ಮ ಕಮ್ಮೂರು, ವಿಜಯಲಕ್ಷ್ಮಿ ಮಲ್ಲಾಡದ, ಮಮತಾ ಮಲ್ಲಾಪುರ, ಜ್ಯೋತಿ ಬಾರ್ಕಿ, ತಿಪ್ಲಾಬಾಯಿ ಎಂ, ಸಂಜನಾ ಬಾರಕೇರ, ಕೇಶವ ಕಿತ್ತೂರು, ಹೊನ್ನಪ್ಪ ಬಾರ್ಕಿ, ತಿರಕನಗೌಡ ಪಾಟೀಲ, ಕುಮಾರ ಬೇಗೂರು, ಚಂದ್ರಪ್ಪ ದೊಡ್ಡಮನಿ, ಗುರಮಗೌಡ ಪಾಟೀಲ, ಹನುಮಂತಪ್ಪ ಸಣ್ಣಬಾರ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net