ಅಂತರಂಗ ಶುದ್ಧಿಯಾಗದ ಹೊರತು ಶರಣನಾಗಲು ಸಾಧ್ಯವಿಲ್ಲ

2 ckm 3
ಚಿಕ್ಕಮಗಳೂರು ಹೊರವಲಯದ ಜಯಬಸವಾನಂದ ತಪೋಭೂಮಿಯಲ್ಲಿ ನಡೆದ ಜಿಲ್ಲಾ ಕದಳಿ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆ ಜಿಲ್ಲಾಧ್ಯಕ್ಷೆಯಾಗಿ ವಿದ್ಯಾಧರೆ ಅಧಿಕಾರ ಸ್ವೀಕರಿಸಿದರು. ಶ್ರೀಜಯಬಸವಾನಂದ ಸ್ವಾಮೀಜಿ, ರವೀಶ್ ಕ್ಯಾತನಬೀಡು, ಮಂಜುನಾಥಸ್ವಾಮಿ, ಜಯ ಚನ್ನೇಗೌಡ, ಬಾಣೂರು ಚನ್ನಪ್ಪ, ಗಂಗಾಧರ್ ಶಿವಪುರ, ಜಯಣ್ಣ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮನುಷ್ಯನ ಒಳಗಿನ ಅನೇಕ ಮುಖವಾಡಗಳನ್ನು ಕಳಚಿ ಅಂತರಂಗ ಶುದ್ಧಿ ಮಾಡದ ಹೊರತು ಶರಣನಾಗಲು ಸಾಧ್ಯವಿಲ್ಲ. ವಚನಕಾರರು ಸತ್ಯಶುದ್ಧವಾದ ಬದುಕನ್ನು ಅರಸಿದವರು. ಅಂತರಂಗ, ಬಹಿರಂಗದ ಶುದ್ಧಿಗಾಗಿ ಇಡೀ ಜೀವಮಾನ ನಡೆದವರು. ಅವರು ಕೊಟ್ಟು ಹೋಗಿರುವ ವಿಚಾರಗಳನ್ನು ನಾವು ವೈಭವೀಕರಿಸದೇ ಅದರಂತೆ ನಡೆದುಕೊಳ್ಳುವುದೇ ನಿಜವಾದ ವಚನದ ಅರ್ಥ ಎಂದು ಕಾಂಗ್ರೆಸ್ ಮುಖಂಡ ರವೀಶ್ ಕ್ಯಾತನಬೀಡು ತಿಳಿಸಿದರು.

ನಗರದ ಹೊರವಲಯದ ಜಯಬಸವಾನಂದ ತಪೋಭೂಮಿಯಲ್ಲಿ ನಡೆದ ಜಿಲ್ಲಾ ಕದಳಿ ವೇದಿಕೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಬರೀ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಸತ್ಯದ ಹೆಜ್ಜೆಯನ್ನು ಯಾರೂ ಇಡುವುದಿಲ್ಲ. ಜಗತ್ತಿನ ನೋವಿನ ಗಾಯಕ್ಕೆ ವಚನದ ಸಿದ್ಧೌಷಧವೇ ಸರಿಯಾದ ದಾರಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ್ ಮಾತನಾಡಿ, ಮಹಿಳೆಯರು ಈ ಕಾಲಕ್ಕೆ ವಚನಗಳನ್ನು ಹೆಚ್ಚು ಅರ್ಥವನ್ನು ಮಾಡಿಕೊಂಡು ಅದರಂತೆ ಬದುಕಬೇಕು. ಜಗತ್ತಿನಲ್ಲಿ ಅಕ್ಕಮಹಾದೇವಿಯಂತಹ ಜ್ಞಾನ ವೈರಾಗ್ಯ ನಿಧಿ ನಮಗೆ ಪ್ರೇರಣೆಯಾಗಬೇಕು. ಬದುಕಿನಲ್ಲಿ ಕಷ್ಟ, ಸುಖಗಳು ಎಷ್ಟೇ ಬರಲಿ ಅವುಗಳನ್ನು ಎದುರಿಸಿ ಸಮಾಜದ ಏಳಿಗೆಗೆ ಮಹಿಳೆಯರು ಪಾಲುದಾರರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಕಾಯಕವೇ ಕೈಲಾಸವನ್ನು ನಾವು ಮಾಡದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಮನುಷ್ಯನ ಒಳ, ಹೊರಗಿನ ಶುದ್ಧೀಕರಣ ಅಗತ್ಯ. ಕಾಯಕ ದಿನಾಚರಣೆಯ ದಿನದಂದು ಕದಳಿ ವೇದಿಕೆ ಉದ್ಘಾಟನೆಯಾಗುತ್ತಿರುವುದು ಸಂತೋಷದ ವಿಷಯ. ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ನಿರಂತರವಾಗಿ ಜನಪರಗೊಳಿಸಿ ಎಂದು ಆಶೀರ್ವದಿಸಿದರು.
ಇದೇ ವೇಳೆ ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ವಿದ್ಯಾಧರೆ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಮಂಜುನಾಥಸ್ವಾಮಿ, ಜಯ ಚನ್ನೇಗೌಡ, ಬಾಣೂರು ಚನ್ನಪ್ಪ, ಗಂಗಾಧರ್ ಶಿವಪುರ, ಜಯಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net