ವಾಸ್ತವಿಕತೆ ಸತ್ವದಿಂದ ಶರಣ ಸಾಹಿತ್ಯಕ್ಕೆ ವಿಶ್ವಮಾನ್ಯತೆ

16KDR1
Published on

ಕಡೂರು: ಶರಣ ಸಾಹಿತ್ಯ ತನ್ನೊಳಗಿರುವ ವಾಸ್ತವಿಕತೆ ಸತ್ವದಿಂದ ವಿಶ್ವಮಾನ್ಯತೆ ಪಡೆದಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಕವಿತಾ ಬೆಳ್ಳಿಪ್ರಕಾಶ್ ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಯಳನಡು ಮಠದಲ್ಲಿ ಏರ್ಪಡಿಸಿದ್ದ ಶರಣರ ಬೆಳದಿಂಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಸಂವೇದನೆಯನ್ನು ಅರ್ಥೈಸಿಕೊಂಡು ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಡುವಲ್ಲಿ ಶ್ರಮಿಸಿದವರು 12ನೇ ಶತಮಾನದ ಶರಣರು. ಸಮ ಸಮಾಜದ ಕಲ್ಪನೆಯಲ್ಲಿ ಕಾಯಕ ತತ್ವ ಪ್ರತಿಪಾದಿಸಿದ ಶರಣರ ವಚನ ಸಾಹಿತ್ಯ ಜೀವನಾನುಭವದ ಸಾರವನ್ನು ಜನರಿಗೆ ತಿಳಿಸುವ ಮೂಲಕ ಇಂದು ವಿಶ್ವಮಾನ್ಯತೆ ಪಡೆದಿದೆ ಎಂದರು.

ಜಾತಿ ,ಮತ, ಪಂಥಗಳ ಭೇದ ಹೋಗಲಾಡಿಸಿ ಅಂತಸ್ತಿನ ತಾರತಮ್ಯ ತೊರೆದು ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದಿತ್ತು. ಮನುಷ್ಯ ತನ್ನ ನಿತ್ಯ ಬದುಕಿನ ಮೂಲಕ ಕಾಯಕ ತತ್ವವನ್ನು ಅರಿತು ಬದುಕುವ ಮತ್ತು ದಾಸೋಹದ ವ್ಯವಸ್ಥೆ ಮೂಲಕ ತಮ್ಮ ಬದುಕು ಕಟ್ಟಿಕೊಂಡು ನಾವೆಲ್ಲರು ಒಂದೇ ಎನ್ನುವ ಭಾವದಿಂದ ಬದುಕುತ್ತಿದ್ದ ಮತ್ತು ಆ ರೀತಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದ ಕಾಲಘಟ್ಟ ಶರಣರದ್ದಾಗಿತ್ತು ಎಂದು ಹೇಳಿದರು.

ಉಪನ್ಯಾಸಕಿ ಭಾಗ್ಯ ಮಲ್ಲೇಶ್ ಮಾತನಾಡಿ, ಜಾತೀಯತೆ ಸೋಂಕಿಲ್ಲದೆ ಸಮಾನತೆ ಕಲ್ಪನೆಯನ್ನು ಸಾಕಾರ ಮಾಡಿದ ಶರಣರ ಸಂದೇಶಗಳನ್ನು ಅರ್ಥೈಸಿಕೊಳ್ಳಬೇಕು. ಸಂಸ್ಕೃತ ಕಾವ್ಯವನ್ನು ಅರ್ಥಮಾಡಿಕೊಳ್ಳದ ಜನ ಆಡುಭಾಷೆ ಮೂಲಕ ರಚನೆಯಾದ ವಚನಗಳ ಮೂಲಕ ಜನ ಅವುಗಳನ್ನು ಓದಿಅರ್ಥೈಸಿಕೊಂಡು ಬದುಕಾಗಿ ಪರಿಣಮಿಸಿಕೊಂಡ ಸಾಹಿತ್ಯವಾಗಿ ಹೊರಹೊಮ್ಮಿದ ಸಾಹಿತ್ಯ ಶರಣ ಸಾಹಿತ್ಯ ಎಂದರು.

ಯಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಿಷತ್‌ನ ಗೌರವ ಸಲಹೆಗಾರ ಟಿ.ಆರ್.ಲಕ್ಕಪ್ಪ, ತಾಲೂಕು ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net