ಜನರ ಸಮಸ್ಯೆಗೆ ಸ್ಪಂದಿಸಲು ಬದ್ಧ

3010 Surapur 01
ಸುರಪುರ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡ ಜನತಾ ದರ್ಶನ ಕರ‍್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಪಂ ಸಿಇಒ ಗರಿಮಾ ಪನ್ವಾರ್ ಇತರರಿದ್ದರು.
Published on

ಸುರಪುರ: ರಾಜ್ಯ ಸರ್ಕಾರ ಜನರ ಬಳಿಗೆ ಹೋದಾಗ ಮಾತ್ರ ಜನಪ್ರತಿನಿಧಿ ಮತ್ತು ಸರ್ಕಾರ ಸಾರ್ವಜನಿಕರ ಬಾಯಲ್ಲಿರಲು ಸಾಧ್ಯ. ಹೀಗಾಗಿ ಜನರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜತೆ ಎರಡು ಬಾರಿ ಸುದೀರ್ಘ ಚರ್ಚೆ ನಡೆದ ನಂತರವೇ ಸರ್ಕಾರಿ ಇಲಾಖೆಗಳಲ್ಲಿರುವ ಸಮಸ್ಯೆ ಗುರುತಿಸಿ ಅವುಗಳನ್ನು ಪರಿಹರಿಸಲು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಯಾದಗಿರಿ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಜನತಾ ದರ್ಶನದಲ್ಲಿ ೨೯೪ ಅರ್ಜಿಗಳಲ್ಲಿ ೧೮೯ ಅರ್ಜಿ ವಿಲೇವಾರಿಯಾಗಿದೆ. ೧೮ ಅರ್ಜಿಗಳಿಗೆ ವಿಳಾಸವೇ ಇರಲಿಲ್ಲ. ಆದ್ದರಿಂದ ಸುರಪುರದಲ್ಲಿ ಅರ್ಜಿ ಪಡೆಯುವಾಗ ವಿಳಾಸ ಬರೆದುಕೊಂಡು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾದಗಿರಿ ಜಿಲ್ಲೆಯ ಆರು ತಾಲೂಕು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು, ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪರಿಹಾರಕ್ಕಾಗಿ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನಾ, ಮೀನುಗಾರಿಕೆ, ಕಂದಾಯ ಇಲಾಖೆಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ೨.೩೨ ಲಕ್ಷ ರೈತರಿದ್ದು, ನೋಂದಣಿ ಮಾಡಿಕೊಳ್ಳದ ೮೦ ಸಾವಿರ ರೈತರು ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಜಾತಿ ಪ್ರಮಾಣ ಪತ್ರ ಹಾಗೂ ಎರಡು ಭಾವಚಿತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಜನಪ್ರತಿನಿಧಿ, ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಅವರ ಸಮಸ್ಯೆ ನಿವಾರಣೆಗೆ ಜನತಾದರ್ಶನ ಕರ‍್ಯಕ್ರಮವನ್ನು ಪ್ರತಿ ತಾಲೂಕು ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ರಾಜ್ಯ ಸರ್ಕಾರದಿಂದ ಜನಸಾಮಾನ್ಯರ ಕುಂದು-ಕೊರತೆಗಳಿಗೆ ಸ್ಪಂದಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನದಂತಹ ಮಹತ್ವಕಾಂಕ್ಷಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಕಚೇರಿ ಆವರಣದಲ್ಲಿ ಜನರು ಕುಳಿತಿರುತ್ತಾರೆ. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಜನತಾ ದರ್ಶನ ಅತ್ಯಂತ ಸೂಕ್ತವಾಗಿದೆ ಎಂದರು.

ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಪಂ ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಎಸ್ಪಿ ಜಿ.ಸಂಗೀತಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಡಿವೈಎಸ್‌ಪಿ ಬಸವೇಶ್ವರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸುರಪುರ ತಹಸೀಲ್ದಾರ್ ಕೆ. ವಿಜಯಕುಮಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಸುರಪುರ ತಾಲೂಕಿಗೆ ಸಂಬಂಧಪಟ್ಟಂತೆ ೧೭೦ ಅರ್ಜಿ ಸ್ವೀಕರಿಸಲಾಗಿದ್ದು, ಈ ಪೈಕಿ ಸ್ಥಳದಲ್ಲಿಯೇ ೭೦ ಅರ್ಜಿಗಳಿಗೆ ಸ್ಪಂದಿಸಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಳಿದವು ಶೀಘ್ರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
| ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net