

ಬೆಂಗಳೂರು: ಉಪಸಮರಕ್ಕೆ ಸಜ್ಜಾಗಿರುವ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಹಾನಗಲ್ ನಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ಕುಟುಂಬಕ್ಕೆ ಮಣೆಹಾಕದೆ ಅಚ್ಚರಿ ಎಂಬಂತೆ ಮಾಜಿ ಶಾಸಕ ಶಿವರಾಜ ಸಜ್ಜನರ್ ಗೆ ಟಿಕೆಟ್ ನೀಡಿದೆ. ಇನ್ನು ಸಿಂದಗಿಯಿಂದ ಮಾಜಿ ಶಾಸಕ ರಮೇಶ್ ಭೂಸನೂರಮಠ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಬಿಜೆಪಿಯ ಕೋರ್ ಕಮಿಟಿ ಭಾನುವಾರ ಸಭೆ ನಡೆಸಿ ಹಾನಗಲ್ ಹಾಗೂ ಸಿಂದಗಿಗೆ ತಲಾ ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಿತ್ತು. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಕೋರ್ ಕಮಿಟಿ ಸಭೆಯ ಶಿಫಾರಸಿನಲ್ಲಿ ಸಿಂದಗಿ ಟಿಕೆಟ್ ಬದಲಾಗುತ್ತದೆ, ಹಾನಗಲ್ ಟಿಕೆಟ್ ರೇವತಿ ಉದಾಸಿ ಅವರಿಗೆ ಖಚಿತವೆಂಬ ನಿರೀಕ್ಷೆ ಇತ್ತು. ಸಿಂದಗಿಯಿಂದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅಭ್ಯರ್ಥಿಯಾಗಬಹುದೆಂದು ಹೇಳಲಾಗುತ್ತಿತ್ತು. ಆದರೆ ಪಟ್ಟಿ ಬಂದಾಗ ಹಾನಗಲ್ ಲೆಕ್ಕಾಚಾರ ಬದಲಾಗಿ, ಸಿಂದಗಿಯಲ್ಲಿ ಭೂಸನೂರಮಠ ಟಿಕೆಟ್ ಗಿಟ್ಟಿಸಿದ್ದರು.
ಮುಖ್ಯಮಂತ್ರಿಗೂ ಪ್ರತಿಷ್ಠೆ: ಹಾನಗಲ್ ಕ್ಷೇತ್ರ ಸಿಎಂ ಬಸವರಾಜ ಬೊಮ್ಮಾಯಿ ತವರು ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಶಿವರಾಜ ಸಜ್ಜನರ್ ಹಾನಗಲ್ ಗೆ ಹೊರಗಿನವರು. ಈ ಕ್ಷೇತ್ರ ಈವರೆಗೆ ಉದಾಸಿ ಹಿಡಿತದಲ್ಲಿತ್ತು. ಇದೇ ಮೊದಲ ಬಾರಿಗೆ ಅವರ ಕುಟುಂಬದ ಕೈ ತಪು್ಪತ್ತಿದೆ. ಹೀಗಾಗಿ ಬಿಜೆಪಿಗೆ ಈ ಕ್ಷೇತ್ರ ಪ್ರತಿಷ್ಠೆಯದಾಗಿದ್ದು, ಇಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಸಿಎಂ ಬೊಮ್ಮಾಯಿ ಅವರಿಗೂ ಅನಿವಾರ್ಯ.
ಹಾವೇರಿ: ಕುಟುಂಬ ರಾಜಕಾರಣಕ್ಕೆ ಮಣೆ ಹಾಕಬಾರದೆಂಬ ಬಿಜೆಪಿ ವರಿಷ್ಠರ ನಿರ್ಣಯದಂತೆ, ದಿ. ಸಿ.ಎಂ. ಉದಾಸಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪರಮಾಪ್ತ ಶಿವರಾಜ ಸಜ್ಜನರಗೆ ಹಾನಗಲ್ಲ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಒಲಿದುಬಂದಿದೆ.
ಕೈ ಹಿಡಿದ ವ್ಯಕ್ತಿ ನಿಷ್ಠೆ: ಉದಾಸಿಯವರ ಗರಡಿಯಲ್ಲಿದ್ದ ಶಿವರಾಜ ಸಜ್ಜನರ, 2004ರಲ್ಲಿ ಬಿಜೆಪಿ ಸೇರ್ಪಡೆಗೊಂಡು ಹಾವೇರಿ ಶಾಸಕರಾಗಿ ಆಯ್ಕೆಯಾದರು. 2008ರ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರ ಎಸ್ ಸಿ ಮೀಸಲಾಗಿದ್ದರಿಂದ ಅವಕಾಶ ವಂಚಿತರಾದರು. ಪಕ್ಕದ ಬ್ಯಾಡಗಿ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದರಾದರೂ ಉದಾಸಿ ಹಾಗೂ ಯಡಿಯೂರಪ್ಪ ಅವರ ಮಾತಿಗೆ ಬದ್ಧರಾಗಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದರು. 2009ರ ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಪ್ರವೇಶಿಸಿದರು. 2013ರಲ್ಲಿ ಬಿಎಸ್ ವೈ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಮೊದಲಿಗರಾಗಿ ವಿಪ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕೆಜೆಪಿ ಸೇರಿದರು. ಬ್ಯಾಡಗಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. ಅದಾದ ನಂತರ ಬಿಎಸ್ ವೈ ಅವರೊಂದಿಗೆ ಬಿಜೆಪಿ ಸೇರಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದರು. ನಂತರ ಯಾವುದೇ ಸ್ಥಾನಮಾನ ಸಿಗದೇ ಇದ್ದರೂ ಪಕ್ಷದಲ್ಲಿಯೇ ಮುಂದುವರಿದಿದ್ದರು.
ಹಾನಗಲ್ ನಲ್ಲಿ ಮಾಜಿ ಸಚಿವ ದಿ. ಸಿ.ಎಂ ಉದಾಸಿ ಕುಟುಂಬಸ್ಥರಿಗೆ ಟಿಕೆಟ್ ಸಿಗುವ ನಿರೀಕ್ಷೆ ಹುಸಿಯಾಗಿದೆ. ಹಾವೇರಿ ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ ಅವರಿಗೆ ಟಿಕೆಟ್ ಖಚಿತವಾಗಿತ್ತು. ಕೋರ್ ಕಮಿಟಿ ಸಭೆಯಲ್ಲಿಯೂ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡಿದರಷ್ಟೇ ಅನುಕೂಲವಾಗಲಿದೆ ಎಂದೇ ಚರ್ಚೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರೇವತಿ ಇಲ್ಲವೇ ಶಿವಕುಮಾರ್ ಉದಾಸಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು. ಕೋರ್ ಕಮಿಟಿ ಶಿಫಾರಸಿನ ನಂತರ ಶಿವಕುಮಾರ್ ಉದಾಸಿ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಕಂಡು ಒತ್ತಡ ಹಾಕಿದ್ದರೆನ್ನಲಾಗಿದೆ. ಆದರೆ ಹೈಕಮಾಂಡ್ ಶಿವರಾಜ ಸಜ್ಜನರ್ ಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ಮುಖಂಡರಿಗೇ ಅಚ್ಚರಿ ತಂದಿದೆ. ಸಜ್ಜನರ್ 2004ರಲ್ಲಿ ಹಾವೇರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.