ಸುರ್ಜೆವಾಲ ಕರ್ನಾಟಕದ ಪ್ರಧಾನಿ: ಅಣ್ಣಾಮಲೈ ಲೇವಡಿ

annamalai
ಕೆ.ಅಣ್ಣಾಮಲೈ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಎಲ್ಲ ಚಟುವಟಿಕೆಗಳಲ್ಲೂ ತಲೆಹಾಕುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಒಂದರ್ಥದಲ್ಲಿ ಕರ್ನಾಟಕದ ಪ್ರಧಾನಮಂತ್ರಿ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದರು.

ದೆಹಲಿ ನಾಯಕರು ರಾಜ್ಯದ ಆಡಳಿತಕ್ಕೆ ಮಾರ್ಗದರ್ಶನ ಮಾಡಬೇಕೇ ಹೊರತು ತಾವೇ ಆಡಳಿತ ನಡೆಸಲು ಮುಂದಾಗಬಾರದು. ಸುರ್ಜೆವಾಲ ಅವರ ಮಾತು, ವರ್ತನೆ, ಸರ್ವಾಧಿಕಾರಿಯಂತೆ ಮಾಡುವ ಆದೇಶಗಳನ್ನು ಗಮನಿಸಿದರೆ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಕನಿಕರ ಉಂಟಾಗುತ್ತದೆ ಎಂದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದರೂ ಹಲವರು ಸರದಿ ಸಾಲಿನಲ್ಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅವರ ಬಳಿಕ ಯತೀಂದ್ರ ಸಿದ್ದರಾಮಯ್ಯಗೂ ಆ ಬಯಕೆಯಿದೆ. ಇನ್ನೊಂದೆಡೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಐದು ವರ್ಷದ ಬಳಿಕ ಮುಖ್ಯಮಂತ್ರಿ ಆಗಬೇಕೆಂದು ಕಾಯುತ್ತಿದ್ದಾರೆ. ಇದುವೇ ಕಾಂಗ್ರೆಸ್‌ನ ನಿಜವಾದ ಸಮಸ್ಯೆ ಎಂದು ವಿಶ್ಲೇಷಿಸಿದರು.
ರಾಜ್ಯ ಸರ್ಕಾರದಲ್ಲಿ ಪವರ್ ಸೆಂಟರ್ ಎಲ್ಲಿದೆ ಎಂಬುದೇ ತಿಳಿಯುತ್ತಿಲ್ಲ. ಪವರ್ ಸೆಂಟರ್ ಇದೆ. ಅಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬ ಭಾವನೆ ಅಧಿಕಾರಿಗಳಿಗೆ ಮೂಡಿದರೆ ಅವರು ಭಯರಹಿತವಾಗಿ ಕೆಲಸ ಮಾಡಬಹುದು. ಪವರ್ ಸೆಂಟರ್ ಕೊರತೆಯೇ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಲು ಮುಖ್ಯ ಕಾರಣ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net