ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸಿಲ್ಲ

IMG-20250726-WA0519
Published on

ಅರಸೀಕೆರೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಯಾವ ಅಧಿಕಾರಿಗಳನ್ನೂ ಭೇಟಿ ಮಾಡಿಲ್ಲ, ಮಾತನಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರಬೆಟ್ಟ ಹಾಗೂ ಕೋಡಿ ಮಠದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯೆ ನೀಡಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದವರೇ ಆದರೂ ಇದುವರೆಗೂ ಯಾವ ಅಧಿಕಾರಿಗೂ ಫೋನ್ ಕರೆ ಕೂಡ ಮಾಡಿಲ್ಲ, ಮಾಡುವುದೂ ಇಲ್ಲ. ಸುರ್ಜೇವಾಲಾ ಅಧಿಕಾರಿಗಳ ಸಭೆ ಮಾಡಿದ್ದಾರೆ ಎಂಬುದು ಸುಳ್ಳು ಎಂದು ತಿಳಿಸಿದರು.

ನಮ್ಮದೇ ಸರ್ಕಾರ ಇದೆ. ಏನಾದರೂ ಹೇಳಬೇಕೆಂದರೆ ಅವರು ನಮಗೆ ಹೇಳುತ್ತಾರೆ. ಏನಾದರೂ ತಪ್ಪುಗಳಿದ್ದರೆ ನಮಗೆ ತಿಳಿಸುತ್ತಾರೆ, ನಾವು ತಿದ್ದಿಕೊಳ್ಳುತ್ತೇವೆ. ಇದನ್ನು ಹೊರತಾಗಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂಬುದು ಸುಳ್ಳು ಎಂದರು.

ಅಧಿಕಾರಿಗಳ ಸಭೆ ಕಾನೂನುಬಾಹಿರ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರು ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ನಾನೇನು ಉತ್ತರ ನೀಡುವುದಿದೆ. ಮುಖ್ಯಮಂತ್ರಿ ಅವರಿಗೆ ನನಗಿಂತ ಹೆಚ್ಚು ಮಾಹಿತಿಯಿದೆ ಎಂದು ಹೇಳಿದರು.

ಯೂರಿಯಾ ಸರಬರಾಜು ಮಾಡುವುದು ಕೇಂದ್ರ ಸರ್ಕಾರ. ರೈತರು ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಹೆಚ್ಚಿನ ಯೂರಿಯಾಗೆ ಈಗಾಗಲೇ ಒತ್ತಾಯವನ್ನು ಮಾಡಿದ್ದೇವೆ. ರೈತರು ತಾಳ್ಮೆಯಿಂದಿರಲಿ. ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಇದರ ಬಗ್ಗೆ ಮಾತನಾಡಿದ್ದಾರೆ ಎಂದರು.

ಜೇನುಕಲ್ಲು ಸಿದ್ದೇಶ್ವರನಿಗೆ ನಮನ ಸಲ್ಲಿಸಿ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ಅಭಿವೃದ್ಧಿ ಕೆಲಸಗಳು ಆಗುತ್ತವೆ. ನನಗೂ ದೇವರ ದರ್ಶನ ಭಾಗ್ಯ ಸಿಕ್ಕಿದೆ. ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದರು.

ಇಷ್ಟು ದೂರ ಬಂದಿದ್ದೇನೆ. ಬಹಳ ವರ್ಷಗಳ ನಂತರ ಭೇಟಿ ನೀಡಿದ್ದೇನೆ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದ್ದಾರೆ ಎಂದು ತಿಳಿದು, ಅವರನ್ನು ಭೇಟಿ ಮಾಡಲು ಬಂದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net