ದೊಡ್ಡ ಕೊಂಡೋತ್ಸವ ಸತ್ತಿಗೆ ಸೂರಿಪಾನಿ ರವಾನೆ

29 HANUR 1
ತಮಿಳುನಾಡಿನ ಬರಗೂರಿನಲ್ಲಿ ನಡೆಯುವ ಕೊಂಡೋತ್ಸವದ ಹಿನ್ನೆಲೆಯಲ್ಲಿ ಮಲೆಮಹಶ್ವರ ಬೆಟ್ಟದಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸತ್ತಿಗೆ ಸೂರಿಪಾನಿಗಳನ್ನು ಕಳಹಿಸಿ ಕೊಡಲಾಯಿತು.
Published on

 ಹನೂರು : ತಮಿಳುನಾಡಿನ ಬರಗೂರಿನಲ್ಲಿ ಜು.1 ರಂದು 12 ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹದೇಶ್ವರ ಸ್ವಾಮಿಯ ದೊಡ್ಡ ಕೊಂಡೋತ್ಸವಕ್ಕೆ ಭಾನುವಾರ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಉತ್ಸವ ಮೂರ್ತಿ ಹಾಗೂ ಸತ್ತಿಗೆ ಸೂರಿಪಾನಿಗಳನ್ನು ಕಳುಹಿಸಿ ಕೊಡಲಾಯಿತು.

ಕೊಂಡೋತ್ಸವದ ಹಿನ್ನೆಲೆ: ಪವಾಡ ಪುರುಷ ಶ್ರೀ ಮಹದೇಶ್ವರರು 77 ಮಲೆಗಳಲ್ಲಿ ಸಂಚರಿಸುತ್ತಿದ್ದ ವೇಳೆ ದುಷ್ಟ ಶ್ರವಣ ಶ್ರೀ ಮಹದೇಶ್ವರರ ಅನುಯಾಯಿಗಳನ್ನು ಸೆರೆಯಲ್ಲಿಟ್ಟು ಹಿಂಸಿಸುತ್ತಿದ್ದನು. ಈ ಬಗ್ಗೆ ಅರಿತು ಮಹದೇಶ್ವರರು ಸ್ಥಳಕ್ಕೆ ತೆರೆಳಿದಾಗ ಮನಸ್ಸಿಗೆ ನೋವುಂಟಾಗಿ ಶ್ರವಣ ಸುರನನ್ನು ಸಂಹಾರ ಮಾಡಿದರು. ಸಮಕಾಲೀನ ಅನುಯಾಯಿಗಳನ್ನು ಸೆರೆಯಿಂದ ಮುಕ್ತಿಗೊಳಿಸಿದರು. ಬಳಿಕ ಮಹದೇಶ್ವರರು ಅನುಯಾಯಿಗಳೊಂದಿಗೆ ಈಗಿನ ತಮಿಳುನಾಡಿನ ತುರುಸನಪಾಳ್ಯಕ್ಕೆ ತೆರಳಿ ಕುರ್ಜಿನ ಬೀದಿಯಲ್ಲಿ ಸಭೆ ನಡೆಸಿದರು. ಈ ವೇಳೆ ದುಷ್ಟ ಶ್ರವಣನ ಸಂಹಾರದ ಕುರುಹಾಗಿ ಅಗ್ನಿ ಕೊಂಡೋತ್ಸವವನ್ನು ನಡೆಸಲಾಯಿತು. ಬಳಿಕ ಮಹದೇಶ್ವರರು ಹಾಗೂ ಅನುಯಾಯಿಗಳು ಅವರವರ ನೆಲೆಗಳಲ್ಲಿ ನೆಲೆಗೊಂಡರು. ಇದರ ನೆನಪಿನಾರ್ಥವಾಗಿ ಮ.ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಹಾಗೂ ತಮಿಳುನಾಡಿನ ದ್ರೋಣಗಿರಿ ಮಠದ ಪೀಠಾಧಿಪತಿಗಳ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ವಿವಿಧ ಪಾಲಿನ ತಂಬಡಿಗಳು ಹಾಗೂ ಭಕ್ತರು ಪ್ರತಿ 12 ವರ್ಷಕ್ಕೊಮ್ಮೆ ದೊಡ್ಡ ಕೊಂಡೋತ್ಸವವನ್ನು ನೆರವೇರಿಸಿಕೊಂಡು ಬರುತ್ತಿರುವುದು ವಾಡಿಕೆ.

ಐತಿಹಾಸಿಕ ಕೊಂಡೋತ್ಸವ: ಐತಿಹಾಸಿಕ ಹಾಗೂ ಸಾಮರಸ್ಯದ ಕೊಂಡೋತ್ಸವವು ಜು.1 ರಂದು ನಡೆಯಲಿದ್ದು, ವಿವಿಧ 9 ದೇವರ ಉತ್ಸವ ಮೂರ್ತಿಗಳು ಹಾಗೂ ತಂಬಡಿಗಳು ಭಾಗವಹಿಸಲಿದ್ದಾರೆ. ಜತೆಗೆ ಕಟ್ಟೆಮನೆ ದೊಡ್ಡ ತಟ್ಟಗಾರರು, ಚಿಕ್ಕಪಟಗಾರರು, ಬರಗೂರಿನ 33 ಗ್ರಾಮ, ಮಲೆಮಹದೇಶ್ವರ ಬೆಟ್ಟ ತಪ್ಪಲಿನ 18 ಹಳ್ಳಿಯ ಭಕ್ತರು ಹಾಗೂ ತಮಿಳುನಾಡಿನ ಹಾಸನೂರು 700 ತಟ್ಟೆಬಾಗಿಲು ತಂಬಡಿಗಳು, ಊರಗೌಡರು, ದಚೆಗಾರರು, ಮಣಿಗಾರರು, ಬೇಡಗಂಪಣರು ಸೇರಿದಂತೆ ಮಲೆಮಹದೇಶ್ವರ ಸ್ವಾಮಿಯ ಭಕ್ತರು ಭಾಗವಹಿಸಲಿದ್ದಾರೆ.

ಉತ್ಸವ ಮೂರ್ತಿ, ಸತ್ತಿಗೆ ಸೂರಿಪಾನಿ ರವಾನೆ: ವೈಶಾಖ ಜ್ಯೇಷ್ಠ ಮಾಸದಲ್ಲಿ ನಡೆಯುವ ಕೊಂಡೋತ್ಸವದ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಬರಗೂರಿನಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ದ್ರೋಣಗಿರಿ ಮಠಾಧಿಪತಿ ಶ್ರೀ ಸುಬ್ರಹ್ಮಣ್ಯ ರಾಜೇಂದ್ರ ಸ್ವಾಮೀಜಿ, ಶ್ರೀ ಅಶೋಕ ರಾಜೇಂದ್ರ ಸ್ವಾಮೀಜಿ, ತಮಿಳುನಾಡಿನ ಬರಗೂರು ಹಾಗೂ ಮ.ಬೆಟ್ಟದ ತಪ್ಪಲಿನ ಬೇಡಗಂಪಣ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಕೊಂಡೋತ್ಸವದ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಅಲ್ಲದೇ ಅಗತ್ಯ ಸಿದ್ಧತೆ ಸಂಬಂಧ ಮುಹೂರ್ತ ಕಂಬ ಪ್ರತಿಷ್ಠಾಪಿಸಲಾಗಿತ್ತು. ಭಾನುವಾರ ಬರಗೂರಿನ 5 ಹಳ್ಳಿಗಳಿಂದ ಮ.ಬೆಟ್ಟಕ್ಕೆ ಆಗಮಿಸಿದ ಮುಖಂಡರು ಸಾಲೂರು ಶ್ರೀ ಅವರನ್ನು ಭೇಟಿಯಾಗಿ ದೇಗುಲದಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಸ್ವಾಮಿಯ ಉತ್ಸವ ಮೂರ್ತಿ, ಸತ್ತಿಗೆ, ಸೂರಿಪಾನಿ ಹಾಗೂ ಬಿರುದು ಬಾವಲಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಬರಗೂರಿನ ಕೊಂಡೋತ್ಸವಕ್ಕೆ ಕಳಹಿಸಿಕೊಡಲಾಯಿತು. ಈ ವೇಳೆ ನೆರೆದಿದ್ದ ಭಕ್ತರ ಜಯಘೋಷ ಮೊಳಗಿಸಿದರು. ಸೋಮವಾರ ಸಂಜೆ 5ಕ್ಕೆ ಬರಗೂರಿನ ತುರುಸನಪಾಳ್ಯದಲ್ಲಿ 9 ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಜು. 1 ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net