

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಸೇತುವೆಗಳು, ರಸ್ತೆ, ಭೂಕುಸಿತ ಸಂಭವಿಸುವ ಪ್ರದೇಶಗಳ ತಕ್ಷಣ ದುರಸ್ತಿಗೆ ಸರ್ಕಾರ ಮುಂದಾಗಿದೆ. ‘ಬಲಿಗೆ ಬಾಯ್ತೆರೆದಿವೆ ಸೇತುವೆ’ ಶೀರ್ಷಿಕೆ ಅಡಿ ಗುರುವಾರ ವಿಜಯವಾಣಿ ರಾಜ್ಯದ ಅಪಾಯಕಾರಿ ಸೇತುವೆಗಳ ಕುರಿತು ಬೆಳಕು ಚೆಲ್ಲಿದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕೃತಿ ವಿಕೋಪದಿಂದ ಸಂಭವಿಸುವ ಹಾನಿಗೆ ಶಾಶ್ವತ ಪರಿಹಾರ ರೂಪಿಸಲು ತೀರ್ವನಿಸಿದೆ.
ರಾಜ್ಯದಲ್ಲಿ ಈಗಾಗಲೇ ಉತ್ತಮ ಮಳೆಯಾಗಿದೆ. ಇನ್ನೆರಡು ತಿಂಗಳು ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜತೆಗೆ ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ವರ್ಷಗಳಲ್ಲಿಯೂ ಪ್ರಕೃತಿ ವಿಕೋಪ ಮುಂದುವರಿಯಲಿವೆ. ಹೀಗಾಗಿಯೇ ಸರ್ಕಾರ ಮುನ್ನೆಚ್ಚರಿಕೆ ಕೈಗೊಂಡಿದೆ.
ಡಿಸಿಗಳಿಗೆ ಸೂಚನೆ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಸೇತುವೆ ಬಿದ್ದು ಹೋದ ಬಳಿಕ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಅಪಾಯದಲ್ಲಿರುವ ಹಾಗೂ ಮರು ನಿರ್ಮಾಣ ಅಗತ್ಯವಿರುವ ಸೇತುವೆ, ಸಂಪೂರ್ಣ ಕುಸಿಯುವ ಹಂತದಲ್ಲಿರುವ ರಸ್ತೆಗಳನ್ನು ಗುರುತಿಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಸಿಎಂ ಅನುದಾನ: ಎಸ್ಡಿಆರ್ಎಫ್ನಲ್ಲಿ ರಿಪೇರಿಗಷ್ಟೇ ಅವಕಾಶವಿದೆ. ಪುನರ್ ನಿರ್ವಣಕ್ಕೆ ಅವಕಾಶ ಇಲ್ಲ. ಆದ್ದರಿಂದಲೇ ಸಿಎಂ ಸಿದ್ದರಾಮಯ್ಯ ತುರ್ತು ಅಗತ್ಯ ಇರುವ ಕಡೆ ಪುನರ್ ನಿರ್ಮಾಣ ಅನುದಾನ ಒದಗಿಸಲು ಮುಂದಾಗಿದ್ದಾರೆ. ಇಂತಹ ಸೇತುವೆ ಹಾಗೂ ರಸ್ತೆಗಳನ್ನು ಗುರುತಿಸುವಂತೆ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಒಂದು ವಾರದೊಳಗೆ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಹೇಳಿದೆ.
ರಸ್ತೆಗಳ ನಿರ್ವಣದ ಜತೆಗೆ ಅಗತ್ಯ ಇರುವ ಶಾಲಾ ಕಟ್ಟಡಗಳನ್ನು ಶಿಕ್ಷಣ ಇಲಾಖೆಯ ಅನುದಾನದಲ್ಲಿ ನಿರ್ಮಾಣ ಮಾಡಬೇಕು. ಹೆಚ್ಚಿನ ಅಗತ್ಯ ಇದ್ದಲ್ಲಿ ವಿಶೇಷ ಅನುದಾನ ನೀಡಲು ಸರ್ಕಾರ ಪರಿಶೀಲನೆ ಮಾಡಲಿದೆ.
ಭೂ ಕುಸಿತದ ಅಪಾಯ: 2018 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಭೂ ಕುಸಿತ ಸಂಭವಿಸಿತು. ಹವಾಮಾನ ವೈಪರಿತ್ಯದ ಪರಿಣಾಮ ಮುಂದಿನ ದಿನಗಳಲ್ಲೂ ಭೂ ಕುಸಿತ ಹೆಚ್ಚಾಗುವ ಅಪಾಯವಿದೆ. ಈ ಅಪಾಯ ತಡೆಯಲು ಸರ್ಕಾರ ಈ ವರ್ಷ 100 ಕೋಟಿ ರೂ. ಮುಂದಿನ ವರ್ಷ 200 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸುತ್ತಿದೆ. ಹೆಚ್ಚಿನ ಹಾನಿಯಾಗುವ ರೆಡ್ ಅಲರ್ಟ್ನಲ್ಲಿರುವ ಪ್ರದೇಶಗಳನ್ನು ಮೊದಲು ತೆಗೆದುಕೊಳ್ಳಲಾಗುತ್ತದೆ. ನಂತರ ಮಧ್ಯಮ ಪ್ರಮಾಣದ ಹಾನಿಯಾಗುವ ಯಲ್ಲೋ ಅಲರ್ಟ್ನಲ್ಲಿರುವ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಗುತ್ತದೆ. ಗೋಡೆ ನಿರ್ವಣ, ಪಿಚ್ಚಿಂಗ್, ಗಿಡ ನೆಡುವುದು, ಗೇಬ್ರಿಯಲ್ ವಾಲ್ಗಳ ನಿರ್ಮಾಣ ಹೀಗೆ ವಿವಿಧ ರೀತಿಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.
ಕೇಂದ್ರಕ್ಕೆ ಮನವಿ: ಸದ್ಯ ರಾಜ್ಯ ಸರ್ಕಾರದಲ್ಲಿ ಎಸ್ಡಿಆರ್ಎಫ್ ನಿಧಿ ಇದೆ. ಮುಂದೆ ಸೆಪ್ಟಂಬರ್ಗೆ ಹೆಚ್ಚಿನ ಹಾನಿಯಾದರೆ ಮಾತ್ರ ಕೇಂದ್ರಕ್ಕೆ ಪರಿಹಾರ ಕೋರಿ ಮನವಿ ಸಲ್ಲಿಸಲಿದೆ.
10 ದಿನದಲ್ಲಿ ಪರಿಹಾರ: ಬೆಳೆ ಹಾನಿಗೆ ಒಳಗಾದ ರೈತರಿಗೆ ಹತ್ತು ದಿನಗಳಲ್ಲಿ ಪರಿಹಾರ ಸಿಗಲಿದೆ. 2 ದಿನಗಳಲ್ಲಿ ಪರಿಹಾರ ಬಿಡುಗಡೆಗೆ ಎಲ್ಲ ಸಿದ್ಧತೆ ಪೂರ್ಣ ವಾಗಲಿದೆ. ನಂತರ ರೈತರ ಖಾತೆಗೆ ಹಣ ಬಿಡುಗಡೆಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
* ಭೂ ಕುಸಿತ ಪ್ರದೇಶಗಳಲ್ಲಿ ಶಾಶ್ವತ ಕ್ರಮ
* ಕೇಂದ್ರದ ತಾಂತ್ರಿಕ ತಂಡಕ್ಕೆ ಆಹ್ವಾನ
* ರೆಡ್, ಆರೆಂಜ್ ಪಟ್ಟಿ ಮಾಡಲು ಸೂಚನೆ
* ಬೀಳುವ ಹಂತದ ಸೇತುವೆ ಗುರುತಿಸುವಿಕೆ
* ಅಪಾಯಕಾರಿ ರಸ್ತೆಗಳ ಪಟ್ಟಿ ಮಾಡುವಿಕೆ
* ರಾ.ಹೆದ್ದಾರಿ ವಿನ್ಯಾಸ ಮರು ಪರಿಶೀಲಿಸಬೇಕು
ವಿನ್ಯಾಸ ಬದಲಾವಣೆ: ಮಲೆನಾಡು, ಕರಾವಳಿಯ ಪಶ್ಚಿಮಘಟ್ಟದಲ್ಲಿ ರಸ್ತೆ ನಿರ್ವಿುಸುತ್ತಿರುವ ರಾ.ಹೆದ್ದಾರಿ ಪ್ರಾಧಿಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಹೀಗಾಗಿ ವಿನ್ಯಾಸದಲ್ಲಿಯೇ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೆ ಪತ್ರ ಬರೆಯಲು ಸರ್ಕಾರ ನಿರ್ಧರಿಸಿದೆ.
ಹಣಕ್ಕೆ ಸಮಸ್ಯೆ ಇಲ್ಲ: ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 767 ಕೋಟಿ ರೂ.ಗಳಿದೆ. ಕಂದಾಯ ಸಚಿವಾಲಯದಲ್ಲಿ 300 ಕೋಟಿ ರೂ. ಇದೆ. ಸದ್ಯಕ್ಕೆ ಹಣದ ಸಮಸ್ಯೆ ಇಲ್ಲವಾದರೂ ಮುಂದೆ ಮಳೆ ಜಾಸ್ತಿಯಾಗಿ ಹಾನಿ ಹೆಚ್ಚಾದರೆ ಹಣದ ಸಮಸ್ಯೆ ತಲೆದೋರಬಹುದು ಎಂಬ ಭಯವೂ ಸರ್ಕಾರಕ್ಕೆ ಇದೆ. ಗುಡ್ಡ ಕೊರೆತಕ್ಕೆ ಷರತ್ತು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಗುಡ್ಡಗಳ ಮೇಲೆ ಮನೆಗಳ ನಿರ್ಮಾಣ ಹೆಚ್ಚು. ಗುಡ್ಡ ಕೊರೆದು ಮನೆ ನಿರ್ವಿುಸುವುದಕ್ಕೆ ಕೆಲವು ಷರತ್ತು ವಿಧಿಸಲಾಗುತ್ತದೆ.
ಪ್ರಕೃತಿ ವಿಕೋಪದಿಂದ ಆಗುವ ಹಾನಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲೇಬೇಕಾಗಿದೆ. ಹವಾಮಾನ ವೈಪರಿತ್ಯದಿಂದ ಆಗುವ ಪರಿಣಾಮಗಳು ಮುಂದಿನ ದಿನಗಳಲ್ಲಿ ಭೀಕರವಾಗಿರುತ್ತವೆ. ಆದ್ದರಿಂದಲೇ ಆ ನಿಟ್ಟಿನಲ್ಲಿಯೂ ಸರ್ಕಾರ ಗಮನ ಹರಿಸಿದೆ. | ಕೃಷ್ಣ ಬೈರೇಗೌಡ ಕಂದಾಯ ಸಚಿವ