

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಶಸ್ತ್ರ ಚಿಕಿತ್ಸಕರ ಸಂಘಟನೆ ಆಶ್ರಯದಲ್ಲಿ ಸರ್ಜನ್ಸ್ ಡೇ ಅಂಗವಾಗಿ ನಗರದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಕರ್ನಾಟಕ ಶಾಖೆ ಹುಬ್ಬಳ್ಳಿ-ಧಾರವಾಡ ಘಟಕದ ಕಾರ್ಯಾಧ್ಯಕ್ಷ ಡಾ. ನಾರಾಯಣಚಂದ್ರ ಹೆಬಸೂರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 30ರಂದು ರಾತ್ರಿ 8 ಗಂಟೆಗೆ ನಗರದ ಐಎಂಎ ಹಾಲ್ ನಲ್ಲಿ ಶಸ್ತ್ರಚಿಕಿತ್ಸಕರ ದಿನಾಚರಣೆ ಏರ್ಪಡಿಸಲಾಗಿದೆ. ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್. ಜೋಶಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸರ್ಜನ್ಸ್ ಡೇ ನಿಮಿತ್ತ ಹಲವು ವಿಧಾಯಕ ಕಾರ್ಯಗಳನ್ನು ಮಾಡಲಾಗಿದೆ. ರಕ್ತದಾನ ಶಿಬಿರ ನಡೆಸುವ ಮೂಲಕ 145ಕ್ಕೂ ಹೆಚ್ಚು ವೈದ್ಯರು ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು ಎಂದರು.
ಹುಬ್ಬಳ್ಳಿಯ ಎಸ್.ಎಂ. ಕೃಷ್ಣ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿತ್ತು. ಅದರಲ್ಲಿ 20ಕ್ಕೂ ಹೆಚ್ಚು ಜನರಿಗೆ ಹರ್ನಿಯಾ, ಅಪೆಂಡಿಕ್ಸ್, ಪೈಲ್ಸ್ ಸೇರಿ ಮುಂತಾದ ಶಸ್ತ್ರ ಚಿಕಿತ್ಸೆಯ ಅಗತ್ಯ ಕಂಡು ಬಂದಿದೆ. ಅವರಿಗೆ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸರ್ಜರಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಘಟಕದ ಅಧ್ಯಕ್ಷ ಡಾ. ಕೆ.ಎಂ. ಬಿಜಾಪುರ, ಸರ್ಜನ್ಸ್ ಡೇ ಸಮಾರಂಭದಲ್ಲಿ ಸೆಮಿನಾರ್ ನಡೆಯಲಿದೆ. ತಜ್ಞ ವೈದ್ಯರು ಉಪನ್ಯಾಸ ನೀಡುವರು. ವೃತ್ತಿನಿರತರು ಹಾಗೂ ಉದಯೋನ್ಮುಖ ಸರ್ಜನ್ಗಳಿಗೆ ಉತ್ತಮ ಮಾಹಿತಿ ಸಿಗಲಿದೆ ಎಂದರು.
ವಾಕ್ಥಾನ್: ಜುಲೈ 1ರಂದು ಬೆಳಗ್ಗೆ 6.30ಕ್ಕೆ ವೈದ್ಯರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಸಲುವಾಗಿ ವಾಕ್ಥಾನ್ ಏರ್ಪಡಿಸಲಾಗಿದೆ. ಶಸ್ತ್ರಚಿಕಿತ್ಸೆ ಎಂದರೇನು, ಅಪಘಾತ ಸಂಭವಿಸಿದಾಗ ಮೊದಲು ಏನು ಮಾಡಬೇಕು, ಆಸ್ಪತ್ರೆಗೆ ಗಾಯಾಳುಗಳನ್ನು ತಲುಪಿಸುವ ಮುನ್ನ ಯಾವೆಲ್ಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು? ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಕಿಮ್ಸ್ ನಿಂದ ವಾಕ್ಥಾನ್ ನಡೆಯಲಿದೆ ಎಂದು ಅವರು ತಿಳಿಸಿದರು.
ಉಪಾಧ್ಯಕ್ಷೆ ಡಾ. ಶಿಲ್ಪಾ ಹುಚ್ಚನ್ನವರ, ಕಾರ್ಯದರ್ಶಿ ಡಾ. ಹರ್ಷ ಕೊಡ್ಲಿವಾಡಮಠ ಇದ್ದರು.