

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 11 ವಿದ್ಯಾರ್ಥಿಗಳು ಹಾಗೂ 7 ಶಿಕ್ಷಕರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇವಲ ಆರು ದಿನಗಳ ಹಿಂದಷ್ಟೇ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು, ಈ ಆರು ದಿನಗಳಲ್ಲಿ ಒಟ್ಟು 15 ವಿದ್ಯಾರ್ಥಿಗಳು ಹಾಗೂ 12 ಮಂದಿ ಶಿಕ್ಷಕರಲ್ಲಿ ಸೋಂಕು ಕಂಡು ಬಂದಿದೆ. ಶಿಕ್ಷಕರಿಂದ ಮಕ್ಕಳಿಗೆ ಸೋಂಕು ತಗುಲಿದೆಯೇ ಅಥವಾ ಮಕ್ಕಳಿಂದಲೇ ಶಿಕ್ಷಕರಿಗೆ ಸೋಂಕು ತಗುಲಿದೆಯೇ ಎಂದು ಹೇಳಲು ಸಾಧ್ಯವಾಗದು ಎಂದರು.
ಸೋಂಕಿತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸುವ ಕಾರ್ಯ ನಡೆದಿದ್ದು ಬಹುತೇಕ ಪ್ರಕರಣಗಳಲ್ಲಿ ಮನೆಯವರು, ಅಕ್ಕಪಕ್ಕದ ಜನರು ಇಲ್ಲವೇ ಅವರು ಪ್ರತಿದಿನ ಹೆಚ್ಚಾಗಿ ಸಂಪರ್ಕದಲ್ಲಿರುವವರಿಂದ ಕರೊನಾ ತಗುಲಿರುವ ಸಾಧ್ಯತೆ ಇದೆ. ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿದ ಬಳಿಕವಷ್ಟೇ ಯಾರಿಂದ ಸೋಂಕು ತಗುಲಿದೆ ಎನ್ನುವುದು ಖಾತ್ರಿಯಾಗಲಿದೆ ಎಂದು ಹೇಳಿದರು.
ಅಗತ್ಯ ಸುರಕ್ಷತಾ ಕ್ರಮ:
ಈ ನಡುವೆ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮ ಅನುಸರಿಸದಿದ್ದರೆ ಸೋಂಕು ಯಾರಿಗೆ ಬೇಕಾದರೂ ತಗುಲಬಹುದು. ಮಾಸ್ಕ್ ಬಳಕೆ, ಭೌತಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸ್ಯಾನಿಟೈಸರ್ ಬಳಸಿ ಸೋಂಕಿನಿಂದ ದೂರ ಉಳಿಯಬಹುದು ಎಂದು ತಿಳಿಸಿದರು.
ಪ್ರಸ್ತುತ ಪತ್ತೆಯಾಗಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಯಾವುದೇ ಲಕ್ಷಣ ಗೋಚರವಾಗದವರಿದ್ದಾರೆ. ಅಂಥವುಗಳಲ್ಲಿ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಿದರು.
ತಪಾಸಣೆಗೆ ನೂಕು ನುಗ್ಗಲು:
ಕರೊನಾ ಸೋಂಕು ತಪಾಸಣೆಗೆ ಪ್ರಸ್ತುತ ನೂಕು ನುಗ್ಗಲು ಕಂಡು ಬಂದಿದ್ದು, ಶಾಲೆ ಆರಂಭವಾದ ಐದು ದಿನಗಳಲ್ಲಿ 12,398 ಜನರ ಗಂಟಲು ದ್ರವ ಸಂಗ್ರಹಿಸಿ 11,630 ಜನರ ಕರೊನಾ ತಪಾಸಣೆ ನಡೆಸಲಾಗಿದ್ದು ಇವರಲ್ಲಿ ಶೇ.70 ರಷ್ಟು ಜನರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಆಗಿದ್ದಾರೆ.ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಡಿಸೆಂಬರವರೆಗೆ ನಿತ್ಯ 1300ರವರೆಗೆ ತಪಾಸಣೆ ಮಾಡಲಾಗುತ್ತಿತ್ತು. ಜ.1ರ ಬಳಿಕ ನಿತ್ಯ 2500ಕ್ಕೂ ಹೆಚ್ಚು ಮಂದಿಯ ಗಂಟಲು ದ್ರವ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5.15ರವರೆಗೆ ಕರೊನಾ ಸೋಂಕಿನ ಮಾದರಿ ಸಂಗ್ರಹಿಸಲಾಗುತ್ತಿದ್ದು, ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. 36 ಗಂಟೆಯೊಳಗಾಗಿ ವರದಿ ನೀಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ರೂಪಿಸಿಕೊಳ್ಳಲಾಗಿದೆ.
ಕಳಸ ಮತ್ತು ನಿಡುವಾಳೆ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಗುಮಾಸ್ತ ಓರ್ವರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಸೋಂಕಿರುವ ಶಿಕ್ಷಕರನ್ನು ಕ್ವಾರಂಟೈನ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಜ.1 ರಿಂದ 12,398 ಮಂದಿ ಒಟ್ಟಾರೆ ತಪಾಸಣೆಗೆ ಒಳಗಾಗಿದ್ದು 51 ಮಂದಿಯಲ್ಲಿ ಮಾತ್ರ ಸೋಂಕಿರುವುದು ದೃಢಪಟ್ಟಿದೆ.
ಶೇ.70ರಷ್ಟು ವಿದ್ಯಾರ್ಥಿಗಳ ಹಾಜರಾತಿ:
ಜಿಲ್ಲೆಯ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಳೆದ ಸೋಮವಾರದಿಂದಲೇ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಏರಿಕೆ ಕಂಡು ಬಂದಿದ್ದು, ಬುಧವಾರ ಶೇ.70ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಬಂದಿದ್ದಾರೆ.
ಎಂಟು ಶೈಕ್ಷಣಿಕ ವಲಯದ 237 ಶಾಲೆಗಳ ಒಟ್ಟು 12,918 ವಿದ್ಯಾರ್ಥಿಗಳಲ್ಲಿ 9021 ಮಂದಿ ಹಾಜರಾಗಿದ್ದು, ಶೇ.70 ರಷ್ಟು ಹಾಗೂ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ವಿಭಾಗದಲ್ಲಿ 8400ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಬಂದಿದ್ದು, ಇಲ್ಲೂ ಸಹ ಶೇ.70 ರಷ್ಟು ಹಾಜರಾತಿ ಪ್ರಗತಿ ಕಂಡು ಬಂದಿದೆ.