

ಆನೇಕಲ್: ಕರೊನಾ ಸಭೆಯಲ್ಲಿ ಸುಳ್ಳು ಹೇಳಿದ ಅಧಿಕಾರಿಗಳ ವಿರುದ್ಧ ಸಚಿವ ಸುರೇಶ್ ಕುಮಾರ್ ಕೆಂಡಾಮಂಡಲರಾದರು.
ಬೊಮ್ಮನಹಳ್ಳಿ ವಲಯ ಬಿಬಿಎಂಪಿ ಉಸ್ತುವಾರಿಯಾಗಿರುವ ಸುರೇಶ್ ಕುಮಾರ್‌ಗೆ ಕರೊನಾ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ಮಂಗಳವಾರ ಸಂಜೆ ಅಲಯನ್ಸ್ ಕಾಲೇಜಿನಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಅಧಿಕಾರಿಗಳಲ್ಲೇ ಸಮನ್ವಯತೆ ಇಲ್ಲದ್ದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಿತ್ರದುರ್ಗ ಲೋಕಸಭಾ ಸಂಸದ ಎ.ನಾರಾಯಣಸ್ವಾಮಿ ಕೂಡ ಅಧಿಕಾರಿಗಳ ವಿರುದ್ಧ ಗರಂ ಆದರು.
ಅಲಯನ್ಸ್ ವಿವಿಯ ಕೆಲ ಬ್ಲಾಕ್‌ಗಳನ್ನ ಕ್ವಾರಂಟೈನ್‌ಗೆ ನೀಡುವಂತೆ ಸುರೇಶ್‌ಕುಮಾರ್ ವಿನಂತಿಸಿದ್ದು, ಕಾಲೇಜು ಆಡಳಿತ ಮಂಡಳಿ ಅದಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಹಾಸ್ಟೆಲನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಕರೊನಾ ಉಸ್ತುವಾರಿ ಮಣಿವಣ್ಣನ್ ಪರಿಶೀಲಿಸಿದರು.
ಜತೆಗೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಸೌಲಭ್ಯಗಳ ಕುರಿತು ಬೇಸರ ವ್ಯಕ್ತಪಡಿಸಿದರು. ತಾಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್ ವಿರುದ್ಧ ಕೆಂಡಕಾರಿದರು. ನಿಮ್ಮನ್ನು ಇನ್ನು ಮುಂದೆ ಆನೇಕಲ್‌ನಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ, ನಿಮ್ಮಂತಹ ಅಧಿಕಾರಿಗಳಿಂದಲೇ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರು.
ಇತ್ತ ಸಾರ್ವಜನಿಕರಿಂದ ಜ್ಞಾನಪ್ರಕಾಶ್ ವಿರುದ್ಧ ಆರೋಪಗಳ ಸುರಿಮಳೆ ಆದ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಆನೇಕಲ್ ತಾಲೂಕು ಗಡಿ ಭಾಗದಲ್ಲಿರುವುದರಿಂದ ಬಹಳಷ್ಟು ಸೂಕ್ಷ್ಮ ಪ್ರದೇಶ, ನಾವು ಸುರಕ್ಷತೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಆನೇಕಲ್‌ನಲ್ಲಿ ಸಾಕಷ್ಟು ಲೋಪ ಹಾಗೂ ಕೊರತೆಗಳಿದ್ದು ಈ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಕರೊನಾ ಕೇರ್‌ಸೆಂಟರ್ ಮಾಡಲು ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದರು.
ಚಿತ್ರದುರ್ಗ ಲೋಕಸಭಾ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ತಾಲೂಕು ಆರೋಗ್ಯ ಅಧಿಕಾರಿ ಹಾಗೂ ತಹಸೀಲ್ದಾರ್ ಮಹದೇವಯ್ಯ ನಡುವೆ ಸಮನ್ವಯತೆಯಿಂದಾಗಿ ತಹಸೀಲ್ದಾರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅದಕ್ಕೆ ಸರಿಯಾಗಿ ಆರೋಗ್ಯಾಧಿಕಾರಿ ಜ್ಞಾನಪ್ರಕಾಶ್ ಸ್ಪಂದಿಸುತ್ತಿಲ್ಲ ಎನ್ನುವುದು ತಿಳಿದುಬಂದಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಬೊಮ್ಮನಹಳ್ಳಿ ಉಸ್ತುವಾರಿ ಮಣಿವಣ್ಣನ್ ,ತಹಸೀಲ್ದಾರ್ ಮಹದೇವಯ್ಯ, ತಾಲೂಕು ಆರೋಗ್ಯ ಅಧಿಕಾರಿ ಜ್ಞಾನಪ್ರಕಾಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ ಹಾಗೂ ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.