ತಾತ್ಕಾಲಿಕ ಟೋಲ್‌ನಲ್ಲಿ 400 ಕೋಟಿ ರೂ. ಸಂಗ್ರಹ

udp-16-sorake
Published on

ಉಡುಪಿ: ಸುರತ್ಕಲ್‌ನಲ್ಲಿ ತಾತ್ಕಾಲಿಕ ನೆಲೆಯಲ್ಲಿ 2015ರಲ್ಲಿ ಟೋಲ್‌ಗೇಟ್ ಪ್ರಾರಂಭವಾಗಿದ್ದು, 2016ರಲ್ಲಿ ಹೆಜಮಾಡಿ ಟೋಲ್ ಓಪನ್ ಆದ ಬಳಿಕ ಅದನ್ನು ಮುಚ್ಚಬೇಕಿತ್ತು. ಆದರೆ 6 ವರ್ಷಗಳಲ್ಲಿ 400 ಕೋಟಿ ರೂ. ಮಿಕ್ಕಿ ಹಣ ಸಂಗ್ರಹಿಸಿದೆ. ನಿಯಮ ಉಲ್ಲಂಘನೆ ಮಾಡಿರುವ ಟೋಲ್ ಗೇಟ್ ತೆರವಿಗೆ ಅ.18ರಂದು ವಿವಿಧ ಸಂಘ ಸಂಸ್ಥೆಗಳ ಬೆಂಬಲದಿಂದ ಮುತ್ತಿಗೆ ಹಾಕುವ ಕಾರ್ಯ ನಡೆಯಲಿದೆ. ತುಳುನಾಡು ವರ್ಸ್‌ಸ್ ಬಿಜೆಪಿ ಟೋಲ್ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಒಂದು ಟೋಲ್‌ನಿಂದ ಇನ್ನೊಂದು ಟೋಲ್‌ಗೆ 60 ಕಿಮೀ ಅಂತರ ಅಗತ್ಯ. ಉಡುಪಿ ಜಿಲ್ಲೆಯ ಜನರ ದುರಾದೃಷ್ಟ ಎಂಬಂತೆ ಹೆಜಮಾಡಿ ಮತ್ತು ಸುರತ್ಕಲ್ ಎರಡೂ ಕಡೆ ಟೋಲ್ ನೀಡುವ ಶಿಕ್ಷೆ. ಸಾಸ್ತಾನದಲ್ಲೂ ಟೋಲ್ ಇದೆ. ಹೀಗಾಗಿ ಅಕ್ರಮ ಟೋಲ್ ತೆರವಿಗೆ ಜನರು ಆಗ್ರಹಿಸುತ್ತಿದ್ದಾರೆ. ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಟೋಲ್ ಕಟ್ಟಬೇಡಿ ಎಂದಿದ್ದರು. ನಿತಿನ್ ಗಡ್ಕರಿ 90 ದಿನದಲ್ಲಿ ಟೋಲ್ ತೆರವು ಮಾಡುವ ಆಶ್ವಾಸನೆ ನೀಡಿದ್ದರು. ಆದರೆ ಈಗಲೂ ಟೋಲ್ ಸಂಗ್ರಹ ಮುಂದುವರಿಯುತ್ತಿದೆ. ಟೋಲ್ ಕಾಂಟ್ರಾೃಕ್ಟರ್‌ಗಳಿಗೆ ಆಡಳಿತಾರೂಢ ಪಕ್ಷದ ಬೆಂಬಲವಿದೆ. ಪ್ರತಿಭಟನೆ ನಿಷ್ಕ್ರಿಯಗೊಳಿಸುವ ಭಾಗವಾಗಿ ಮುಖಂಡರ ಮನೆಗಳಿಗೆ ಪೊಲೀಸರು ತೆರಳಿ ಬಾಂಡ್ ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಕಾಂಟ್ರಾೃಕ್ಟದಾರರ ಹಿತಾಸಕ್ತಿ ಕಾಯುತ್ತಿದೆ ಎಂದು ಆರೋಪಿಸಿದರು.

ಪಿಎಪ್‌ಐ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ 2 ಮುಖಗಳು. ಎಸ್‌ಡಿಪಿಐ ನಿಷೇಧ ಮಾಡದಿರುವುದು ಬಿಜೆಪಿ ಚುನಾವಣಾ ಕಾರ್ಯತಂತ್ರದ ಭಾಗವಾಗಿದೆ. ಅಲ್ಪಸಂಖ್ಯಾತರ ಮತ ವಿಂಗಡನೆ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಪ್ರಮೋದ್ ಮಧ್ವರಾಜ್ ಅವರಿಗೆ ಕಾಂಗ್ರೆಸ್‌ನಿಂದ ಯಾವುದೇ ತೊಂದರೆ ಆಗಿಲ್ಲ. ಅವರಿಂದಲೇ ನಮಗೆ ಕೆಲವು ಸಮಸ್ಯೆಯಾಗಿದೆ. ಅವರ ತಾಯಿ ಬಿಜೆಪಿಯಲ್ಲಿದ್ದ ಸಮಯದಲ್ಲೂ ಬ್ರಹ್ಮಾವರದಿಂದ ಸ್ಪರ್ಧಿಸಲು ಟಿಕೇಟ್ ನೀಡುವಂತೆ ನಾನೇ ಖುದ್ದು ಶಿಫಾರಸ್ಸು ಮಾಡಿದ್ದೆ ಎಂದು ಹೇಳಿದರು.

ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೊಷ್ ಕುಲಾಲ್, ಕಾಪು ಬ್ಲಾಕ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಪ್ರಚಾರ ಸಮಿತಿ ಅಧ್ಯಕ್ಷರಾದ ಜಿತೇಂದ್ರ ಪುರ್ಟಾಡೋ, ಚರಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net