ಸುರತ್ಕಲ್ ಟೋಲ್‌ಗೇಟ್ ಇರಲ್ಲ, ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಕಟ್ಟಿ!

surathkal tollgate
Published on

ಮಂಗಳೂರು: ಭಾರಿ ಜನಾಕ್ರೋಶಕ್ಕೆ ತುತ್ತಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್‌ಐಟಿಕೆ ಟೋಲ್ ಪ್ಲಾಜಾವನ್ನು ಕೇಂದ್ರ ಸರ್ಕಾರ ಹೆಜಮಾಡಿ ಟೋಲ್ ಪ್ಲಾಜಾದೊಂದಿಗೆ ವಿಲೀನಗೊಳಿಸಿದೆ. ಸುರತ್ಕಲ್-ನಂತೂರು-ಪಡೀಲ್ ರಸ್ತೆ ಯೋಜನೆಗೆ ಸಂಬಂಧಿಸಿದ ಶುಲ್ಕವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸಂಗ್ರಹಿಸಲು ಆದೇಶ ಹೊರಡಿಸಿದೆ.

ಸೋಮವಾರ ಹೊರಬಿದ್ದಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನ.11ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಎಲ್ಲೂ ಸುರತ್ಕಲ್ ಟೋಲ್‌ಗೇಟ್ ರದ್ದು ಅಥವಾ ವಿಲೀನ ಪದ ಬಳಸಿಲ್ಲ. ಆದರೆ, ಹೆಜಮಾಡಿಯಲ್ಲಿ ನವಯುಗ ಸಂಸ್ಥೆಯವರು ಹೆಚ್ಚುವರಿಯಾಗಿ ಸಂಗ್ರಹಿಸಬೇಕಾಗಿರುವ ಶುಲ್ಕಕ್ಕೆ 18.362 ಕಿ.ಮೀ. ದೂರದ ರಸ್ತೆಯನ್ನು ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಿಂದ ನಂತೂರುವರೆಗಿನ 14.412 ಕಿ.ಮೀ. ಉದ್ದದ ರಸ್ತೆ, ರಾಷ್ಟ್ರೀಯ ಹೆದ್ದಾರಿ 75ರ ನಂತೂರಿನಿಂದ ಪಡೀಲ್‌ವರೆಗಿನ 1.025 ಕಿ.ಮೀ. ಬೈಪಾಸ್ ರಸ್ತೆ ಹಾಗೂ ಸುರತ್ಕಲ್-ಪಡೀಲ್ ನಡುವೆ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ, ಕುಲಶೇಖರದಲ್ಲಿ ಸಿಗುವ ಒಟ್ಟು 5 ಫ್ಲೈಓವರ್‌ಗಳ (2.9250 ಕಿ.ಮೀ. ಉದ್ದ)ಬಳಕೆಗೆ ಶುಲ್ಕವನ್ನು ವರ್ಗೀಕರಿಸಲಾಗಿದೆ.

ಈ ಶುಲ್ಕವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ನವಯುಗ ಕಂಪನಿಯವರು ಹೆಚ್ಚುವರಿಯಾಗಿ ಸಂಗ್ರಹಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ದರಪಟ್ಟಿ ಶೀಘ್ರ ಬಿಡುಗಡೆ: ರಸ್ತೆ, ಬೈಪಾಸ್, ಫ್ಲೈಓವರ್‌ಗಳಿಗೆ 2007-08ನೇ ಸಾಲಿನ ಮೂಲದರವನ್ನು ಆಧರಿಸಿ ಪ್ರತ್ಯೇಕವಾಗಿ ಶುಲ್ಕ ನಿಗದಿ ಮಾಡಲಾಗಿದೆ. ಸುರತ್ಕಲ್ ಟೋಲ್‌ಗೇಟ್‌ನಲ್ಲಿ ವಿಧಿಸುತ್ತಿದ್ದಷ್ಟೇ ಶುಲ್ಕವನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲಿ ಸಂಗ್ರಹಿಸಲು ಸೂಚಿಸಿರುವುದು ಕಂಡುಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗವು ಪ್ರತ್ಯೇಕವಾಗಿ ದರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಟೋಲ್‌ಗೇಟ್ ವಿಲೀನ ಕುರಿತು ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿ ಸ್ಥಳೀಯವಾಗಿ ಆದೇಶ ಹೊರಡಿಸುವ ನಿರೀಕ್ಷೆಗಳಿವೆ.

ಪ್ರಯಾಣಿಕರಿಗೆ ಹೊರೆ: ಸುರತ್ಕಲ್(ಎನ್‌ಐಟಿಕೆ/ಮುಕ್ಕ) ಟೋಲ್‌ಗೇಟ್ ರದ್ದುಕೊಂಡಿರುವುದು ಸಂತಸದ ಸಂಗತಿಯಾದರೂ, ಇದರ ಶುಲ್ಕವನ್ನು ಹೆಜಮಾಡಿಯಲ್ಲಿ ಭರಿಸುತ್ತಿರುವುದು ಹೆಚ್ಚಿನ ವಾಹನ ಪ್ರಯಾಣಿಕರಿಗೆ ಹೊರೆಯಾಗಿಯೇ ಮುಂದುವರಿಯಲಿದೆ. ಸುರತ್ಕಲ್ ಟೋಲ್‌ಗೇಟ್ ರದ್ದುಗೊಳ್ಳುವುದರಿಂದ ಹೆಜಮಾಡಿಯವರೆಗೆ ಸಂಚರಿಸುವ ಬಸ್, ಟ್ಯಾಕ್ಸಿ, ಲಾರಿ, ಟೆಂಪೋ ಸಹಿತ ಎಲ್ಲ ವಾಹನಗಳು ಅಲ್ಲಿಯವರೆಗೆ ಸುಂಕ ಇಲ್ಲದೆ ಹೋಗಬಹುದು. ಆದರೆ, ಉಡುಪಿಯಿಂದ ಹೆಜಮಾಡಿ ಟೋಲ್‌ಗೇಟ್ ದಾಟಿ ಬರುವ ಮೂಲ್ಕಿ ಆಸುಪಾಸಿನವರಿಗೆ ಹೆಚ್ಚುವರಿ ಶುಲ್ಕ ಹೊರೆಯಾಗಲಿದೆ. ಕೆಎ 19 ನೋಂದಣಿಯ ಕಾರು ಮತ್ತಿತರ ಖಾಸಗಿ ವಾಹನಗಳಿಗೆ ಇದುವರೆಗೆ ಮುಕ್ಕದಲ್ಲಿ ಟೋಲ್ ಪೂರ್ಣ ವಿನಾಯಿತಿ ಇತ್ತು. ಹೆಜಮಾಡಿಯಲ್ಲಿ ವಿಲೀನಗೊಳ್ಳುವುದರಿಂದ ಈ ಲಾಭ ಕೆಎ 19 ವಾಹನಗಳಿಗೆ ಇನ್ನು ಸಿಗುವುದಿಲ್ಲ.

ಮುಂದುವರಿದ ಅಹರ್ನಿಶಿ ಧರಣಿ: ಆರು ವರ್ಷಗಳ ಸತತ ಹೋರಾಟದ ನಂತರ ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿರುವ ಮಾಹಿತಿ ಇದೆ. ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ತ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಹಗಲು- ರಾತ್ರಿ ಧರಣಿ ನಿರತವಾಗಿರುವ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಗೆ ಟೋಲ್‌ಗೇಟ್ ತೆರವು ಕುರಿತು ಈವರೆಗೂ ಜಿಲ್ಲಾಡಳಿತದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಟೋಲ್ ತೆರವುಗೊಳ್ಳುವರೆಗೆ ಧರಣಿ ಮುಂದುವರಿಯುತ್ತದೆ ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಈ ನಡುವೆ, ಸೋಮವಾರ ಮಂಗಳೂರಿನಿಂದ ಟೋಲ್‌ಗೇಟ್‌ವರೆಗೆ ಆಯೋಜಿಸಿದ್ದ ಡಿವೈಎಫ್‌ಐ, ಎಸ್‌ಎಫ್‌ಐ ಬೈಕ್ ರ‌್ಯಾಲಿಯನ್ನು ಪೊಲೀಸರು ತಡೆದು, ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಸಂಸದ ಟ್ವೀಟ್: ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ರದ್ದುಗೊಳಿಸಿರುವ ಕುರಿತು ದಕ್ಷಿಣ ಕನ್ನಡ ಸಂಸದ ಸೋಮವಾರ ಟ್ವೀಟ್ ಮಾಡಿದ್ದಾರೆ. ತಾಂತ್ರಿಕ ವಿಚಾರಗಳನ್ನು ಪೂರೈಸಲಾಗಿದೆ. ಕೇಂದ್ರ ಸಚಿವ ಗಡ್ಕರಿಯವರು ಹಿಂದೆ ಭರವಸೆ ನೀಡಿದಂತೆ ಟೋಲ್‌ಗೇಟ್ ರದ್ದುಗೊಂಡಿದೆ. ಮುಂದೆ ಹೆಜಮಾಡಿಯಲ್ಲಿ ಮಾತ್ರ ಟೋಲ್ ಸಂಗ್ರಹವಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಯುಪಿಎ ಕೊಡುಗೆ: 2013ರಲ್ಲಿ ಯುಪಿಎ ಸರ್ಕಾರ ಸುರತ್ಕಲ್ ಟೋಲ್‌ಗೇಟ್ ಸ್ಥಾಪಿಸಿದಾಗ ನಾನು ವಿರೋಧಿಸಿದ್ದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಟೋಲ್ ತೆರವಿನ ಪ್ರಯತ್ನ ಆರಂಭವಾಗಿತ್ತು. ಸಂಸದರ ಪ್ರಯತ್ನದ ಬಳಿಕ ಕೇಂದ್ರ ಟೋಲ್ ತೆರವುಗೊಳಿಸಲು ಕ್ರಮ ಕೈಗೊಂಡಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದ್ದಾರೆ.

ಬ್ರಹ್ಮರಕೂಟ್ಲು ಕೂಡ ರದ್ದು ಮಾಡಿ: ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಹೋರಾಟಕ್ಕೆ ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಸಂಸದರು ವಿಳಂಬವಾದರೂ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಇದು ಸಂಘಟಿತ ಹೋರಾಟದ ಫಲ. ಇದೇ ರೀತಿ ಬ್ರಹ್ಮರಕೂಟ್ಲು ಟೋಲ್‌ಗೇಟ್ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.

ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿರುವ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ಬಳಿಕ ಟೋಲ್ ಸಂಗ್ರಹ ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ನಾವು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾದ್ಯವಿಲ್ಲ. | ಲಿಂಗೇಗೌಡ, ಯೋಜನಾಧಿಕಾರಿ, ಎನ್‌ಎಚ್‌ಎಐ ಮಂಗಳೂರು ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net