ಸುರತ್ಕಲ್‌ನಲ್ಲಿ ಕೈ-ಕಮಲ ಜಿದ್ದಾಜಿದ್ದಿ, ಕಾಂಗ್ರೆಸ್‌ನಲ್ಲಿ ಹೊಸಮುಖ ಪ್ರಯೋಗ ಚಿಂತನೆ? ಹಾಲಿ ಶಾಸಕರಿಗೇ ಬಿಜೆಪಿ ಟಿಕೆಟ್ ಸಾಧ್ಯತೆ

surathkal
Published on

- ಶ್ರವಣ್‌ಕುಮಾರ್ ನಾಳ ಮಂಗಳೂರು

ಹೊಸಮುಖ ಪ್ರಯೋಗದಿಂದ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ವಶದಲ್ಲಿರುವ ಮಂಗಳೂರು ಉತ್ತರ(ಸುರತ್ಕಲ್) ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಮರಳಿ ಪಡೆಯಲು ಕಾಂಗ್ರೆಸ್ ಕೂಡ ಹೊಸಮುಖ ಪ್ರಯೋಗ ಮೂಲಕ ತಂತ್ರಗಾರಿಕೆ ಹೆಣೆದಿದೆ.

ಪ್ರತಿ ಚುನಾವಣೆಯಲ್ಲಿ ಹಿಂದುತ್ವದ ಅಸ್ತ್ರ ಪ್ರಯೋಗಿಸುವ ಬಿಜೆಪಿ ಕಳೆದ ಚುನಾವಣೆಯಲ್ಲಿ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕಿದ್ದರಿಂದ ಡಾ.ಭರತ್ ಶೆಟ್ಟಿ ವೈ. ಅವರು ಮೊಹಿಯುದ್ದೀನ್ ಬಾವ ವಿರುದ್ಧ ಸುಲಭದ ಜಯ ದಾಖಲಿಸಿದ್ದರು. ಈ ಬಾರಿ ಅಲ್ಲಿ ಬಿಜೆಪಿಗೆ ಅಭ್ಯರ್ಥಿ ಬದಲಾಯಿಸುವ ಯಾವುದೇ ಅವಶ್ಯಕತೆ ಇಲ್ಲ.

ಆದರೆ ಕಾಂಗ್ರೆಸ್ ಪರಿಸ್ಥಿತಿ ಮೊದಲಿನಂತಿಲ್ಲ. ಕಾಂಗ್ರೆಸ್‌ನಿಂದ 3 ಬಾರಿ ಸ್ಪರ್ಧಿಸಿ ಒಮ್ಮೆ ಶಾಸಕನಾದ ಮೊಹಿಯುದ್ದೀನ್ ಬಾವ ಈ ಬಾರಿಯೂ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿ. ಇವರಿಗೆ ಸ್ಪರ್ಧಿಯಾಗಿರುವವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೆಳೆಸಿಕೊಂಡಿರುವ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಆರಂಭಿಸಿದ್ದಾರೆ. ಜೊತೆಗೆ ಕ್ಷೇತ್ರದಲ್ಲೂ ಅವರ ಓಡಾಟ ಹೆಚ್ಚಾಗಿದೆ, ಕಾರ್ಯಕರ್ತರೊಂದಿಗೆ ಸಮಾಲೋಚನೆ, ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದು ನಡೆಯುತ್ತಿದೆ. ಇದು ಅಭ್ಯರ್ಥಿ ಬದಲಾವಣೆ ಮೂಲಕ ಹೊಸ ಮುಖಕ್ಕೆ ಅವಕಾಶ ನೀಡುವ ಸಾಧ್ಯತೆಗಳನ್ನು ಮುಂದಿಟ್ಟಿದೆ. ಪ್ರತಿಭಾ ಕುಳಾಯಿ ಕೂಡ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ.

 ಬಿಜೆಪಿಯಿಂದ ಬದಲಾವಣೆ ಇಲ್ಲ:

ಕ್ಷೇತ್ರದಲ್ಲಿ ಹಿಂದಿನಿಂದಲೇ ಕಾಂಗ್ರೆಸ್‌ನಿಂದ ಹಿಂದು ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುತ್ತಿತ್ತು. 2008ರಲ್ಲಿ ಮೊಹಿಯುದ್ದೀನ್ ಬಾವ ಅವಕಾಶ ಪಡೆದರು. ಆ ಚುನಾವಣೆಯಲ್ಲಿ ಸತತ ಎರಡನೇ ಸಲ ಕೃಷ್ಣ ಪಾಲೆಮಾರ್ ವಿಜಯ ಪತಾಕೆ ಹಾರಿಸಿದರು. ಆದರೆ 2013ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಾವ ಗೆದ್ದರು. ಪಾಲೆಮಾರ್ ಸೋಲನುಭವಿಸಿ ನೇಪಥ್ಯಕ್ಕೆ ಸರಿದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಭರತ್ ಶೆಟ್ಟಿ ಎದುರು ಬಾವ ಸೋಲುಂಡರು.

ಬಿಜೆಪಿ ಜತೆ ಬಹಿರಂಗವಾಗಿ ಮುನಿಸಿಕೊಂಡಿರುವ ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಪಕ್ಷದಲ್ಲಿ ತೆರೆಮರೆಗೆ ಸೇರಿದಿದ್ದಾರೆ. ಈ ನಡುವೆ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಕ್ಯಾ.ಬ್ರಿಜೇಶ್ ಚೌಟ ಹೆಸರೂ ಬಿಜೆಪಿಯ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಆದರೆ ಅಂತಿಮವಾಗಿ ಹಾಲಿ ಶಾಸಕ ಭರತ್ ಶೆಟ್ಟಿಯವರೇ ಟಿಕೆಟ್ ಪಡೆಯುವುದು ಪಕ್ಕ.

------------------------------

ಅಭಿವೃದ್ಧಿ ಮಂತ್ರ:

ಬಿಜೆಪಿಯಲ್ಲಿ ಹಾಲಿ ಶಾಸಕ ಡಾ.ಭರತ್ ಶೆಟ್ಟಿ ಅವರಿಗೆ ಅಭಿವೃದ್ಧಿ ಕಾರ್ಯಗಳೇ ಮುಂದಿನ ಚುನಾವಣಾ ಅಸ್ತ್ರ. ಕಳೆದ 5 ವರ್ಷಗಳಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ 1986 ಕೋಟಿ ರೂ. ಅನುದಾನ ತಂದಿರುವುದು ಹೆಗ್ಗಳಿಕೆ. ಗೋ ಹತ್ಯೆ, ಗೋ ಹಂತಕರ ವಿರುದ್ಧ ಗುಡುಗಿ ಹಂತಕರ ಹೆಡೆ ಮುರಿಕಟ್ಟಿ ಆಸ್ತಿ ಜಪ್ತಿ ಮಾಡಿರುವುದು ಇಡೀ ರಾಜ್ಯದಲ್ಲಿ ಗಮನ ಸೆಳೆದಿದೆ. ಕಾರ್ಯಕರ್ತರೊಂದಿಗೂ ಅವರು ನಿಕಟ ಸಂಪರ್ಕ ಹೊಂದಿದ್ದಾರೆ. ರಾಜ್ಯ ನಾಯಕರೂ ಭರತ್ ಶೆಟ್ಟಿ ಪರ ಒಲವು ಹೊಂದಿದ್ದಾರೆ.

------------

ಎಸ್‌ಡಿಪಿಐ ಸ್ಫರ್ಧೆ ಬಿಜೆಪಿಗೆ ಲಾಭ

ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಗಮನಾರ್ಹ ಮತದಾರರನ್ನು ಹೊಂದಿದೆ. ಕಾಂಗ್ರೆಸ್‌ನಿಂದ ಮೊಹಿಯುದ್ದೀನ್ ಬಾವ ಕಣಕ್ಕಿಳಿದು ಗೆದ್ದ 2013ರ ಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧಿಸಿ 3323 ಮತ ಗಳಿಸಿತ್ತು. 2018ರ ಚುನಾವಣೆಯಲ್ಲಿ ಬಾವ ಅವರನ್ನು ಬೆಂಬಲಿಸಲು ಎಸ್‌ಡಿಪಿಐ ಸ್ಪರ್ಧೆ ಮಾಡಿರಲಿಲ್ಲ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಾರಿಯೂ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ತಪ್ಪಿದರಷ್ಟೇ ಎಸ್‌ಡಿಪಿಐ ಸ್ಪರ್ಧೆಗಿಳಿಯಬಹುದು. ಎಸ್‌ಡಿಪಿಐ ಸ್ಪರ್ಧಿಸಿದರೆ ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರಗಳಿವೆ.

--------

ಹಿಂದು ಅಭ್ಯರ್ಥಿಗೆ ಕೈ ಟಿಕೆಟ್?

ಬಿಜೆಪಿಯಲ್ಲಿ ಹಿಂದು ಅಭ್ಯರ್ಥಿ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸುವುದರಿಂದ ಮತ ವಿಭಜನೆ ಸ್ಪಷ್ಟ. ಕಳೆದ ಚುನಾವಣೆಯಲ್ಲಿ ಬಹುಸಂಖ್ಯಾತ ಹಿಂದುಗಳ ಮತ ಬಹುತೇಕ ಬಿಜೆಪಿಗೇ ಬಿದ್ದಿರುವುದರಿಂದ ಸುಲಭ ಜಯ ದೊರೆತಿದೆ. ಈ ಬಾರಿಯೂ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿದರೆ ಮತ್ತೆ ಮತಗಳ ಧ್ರುವೀಕರಣ ಆಗುವ ಸಾಧ್ಯತೆ ಇರುವ ಕಾರಣ ಹಿಂದು ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ನಡೆದಿದೆ. ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ.ಖಾದರ್ ಸ್ಪರ್ಧೆ ಮಾಡುವುದರಿಂದ ಉತ್ತರ ಕ್ಷೇತ್ರದಲ್ಲಿ ಹಿಂದು ಅಭ್ಯರ್ಥಿಗೆ ಟಿಕೆಟ್ ನೀಡಲು ಅವಕಾಶವಿದೆ. ಜಾತಿ ಲೆಕ್ಕಾಚಾರದಲ್ಲಿ ಸೀಟು ಹಂಚಿಕೆಯಾದರೆ, ಸುರತ್ಕಲ್‌ನಲ್ಲಿ ಹಿಂದು ಅಭ್ಯರ್ಥಿಗೆ ಕಾಂಗ್ರೆಸ್ ಚಿಂತಿಸಬಹುದು.

--------

ಕಳೆದ ಮೂರು ಚುನಾವಣೆಗಳ ಫಲಿತಾಂಶ:

2008: ಕೃಷ್ಣ ಜೆ. ಪಾಲೆಮಾರ್ -70,052, ಬಿ.ಎ ಮೊಹಿಯುದ್ದೀನ್ ಬಾವ - 60,309

2013: ಬಿ.ಎ. ಮೊಹಿಯುದ್ದೀನ್ ಬಾವ- 69,897, ಕೃಷ್ಣ ಜೆ. ಪಾಲೆಮಾರ್ - 64,524

2018: ಡಾ.ಭರತ್ ವೈ. ಶೆಟ್ಟಿ - 98,648, ಬಿ.ಎ.ಮೊಹಿಯುದ್ದೀನ್ ಬಾವ- 72,000

---------

2.28 ಲಕ್ಷ ಮತದಾರರು:

ಮಂಗಳೂರು ಉತ್ತರ ಕ್ಷೇತ್ರದಲ್ಲಿ 1,11,448 ಪುರುಷರು, 1,16,570 ಮಹಿಳೆಯರು ಮತ್ತು 7 ಇತರರು ಸೇರಿ ಒಟ್ಟು 2,28,055 ಮತದಾರರಿದ್ದಾರೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ.74 ಹಾಗೂ 2013ರಲ್ಲಿ ಶೇ.71.5 ಮತದಾನವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net