

ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಯೂನಿಯನ್ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಆಂದೋಲನ ಕಾರ್ಯಕ್ರಮ ಗುರುವಾರ ನಡೆಯಿತು. ಜಿಲ್ಲಾ ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಕೂಡುಮಂಗಳೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಆಯಾ ಗ್ರಾಮದ ಬ್ಶಾಂಕ್ ಶಾಖೆ ಮುಖಾಂತರ ಪ್ರತಿ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೂನಿಯನ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೆಂಕಟರಮಣ, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭಿಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ 20ರೂ ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 2 ಲಕ್ಷ ರೂ. ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುತ್ತದೆ.
ವಾರ್ಷಿಕವಾಗಿ 436 ರೂ.ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೂ ಕೂಡ 2 ಲಕ್ಷ ರೂ.ಗಳ ವಿಮಾ ಮೊತ್ತ ಸಿಗುತ್ತದೆ. ಎರಡನ್ನೂ ಮಾಡಿಸಿಕೊಂಡಲ್ಲಿ 4 ಲಕ್ಷ ರೂ. ಗಳ ವರೆಗಿನ ವಿಮಾ ಮೊತ್ತ ಸಿಗುತ್ತದೆ. 60 ವಯಸ್ಸು ಆದ ನಂತರದಲ್ಲಿ ಪಿಂಚಣಿ ರೂಪದಲ್ಲಿ 1 ಸಾವಿರ ರೂ.ಗಳಿಂದ 5 ಸಾವಿರ ರೂ. ವರೆಗಿನ ಪಿಂಚಣಿ ಹಣ ಸಿಗಬೇಕಾದರೆ ಈಗಾಗಲೇ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸುವಂತೆ ತಿಳಿಸಿದರು.
ಆರ್ಥಿಕ ಸಮಾಲೋಚಕರಾದ ನಬಿ ಮಾತನಾಡಿ ಪ್ರತಿಯೊಬ್ಬರು ಕೆ.ವೈ.ಸಿ ಕಡ್ಡಾಯವಾಗಿ ಮಾಡಿಸಬೇಕು. ಎಲ್ಲರೂ ನಿಮ್ಮ ಖಾತೆ ಇರುವ ಬ್ಯಾಂಕ್ ಗಳಿಗೆ ತೆರಳಿ ತಮ್ಮ ಗುರುತಿನ ಚೀಟಿ, ಆಧಾರ್ ಕಾರ್ಡ ನೀಡಿ ಮರು ಕೆವೈಸಿ ಮಾಡಿಸಬೇಕು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ನಬಾರ್ಡ್ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು ಇದರ ಮುಖ್ಯ ಉದ್ದೇಶವೂ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್‌ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದರು.
ಆರ್ಥಿಕ ಸಮಾಲೋಚಕ ಸಿ.ಜೆ. ಹರೀಶ್, ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ, ಹರೀಶ್ ಇದ್ದರು.