ಸುರಕೋಡ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

30 NRD-1
Published on

ನರಗುಂದ: ಸತತ ಪರಿಶ್ರಮ, ಸರ್ಕಾರದ ಸೌಲಭ್ಯಗಳ ಸದ್ಬಳಕೆಯೊಂದಿಗೆ ಜನರಿಗೆ ಉತ್ತಮ ಸೇವೆ ನೀಡಬೇಕು ಎಂಬ ತುಡಿತವಿದ್ದರೆ ಕುಗ್ರಾಮವನ್ನು ಮಾದರಿಯಾಗಿಸಬಹುದು ಎಂಬುದಕ್ಕೆ ತಾಲೂಕಿನ ಸುರಕೋಡ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ. ಅತ್ಯುತ್ತಮ ಕಾರ್ಯ ನಿರ್ವಹಣೆ ಮೂಲಕ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಬೆಣ್ಣೆಹಳ್ಳದ ಪ್ರವಾಹಕ್ಕೆ ತುತ್ತಾಗುತ್ತಿರುವ ಸುರಕೋಡ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಗ್ರಾಮವಿಕಾಸ ಯೋಜನೆಯ 10 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ, 10 ಲಕ್ಷ ರೂ. ವೆಚ್ಚದಲ್ಲಿ ನೂತನ ಜಿಮ್ ಕಟ್ಟಡ, ಎಸ್‌ಸಿ/ಎಸ್ಟಿ ಬಡಾವಣೆಗಳಲ್ಲಿ 75ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, 3 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಕ್ ಮತ್ತು ಎಲ್‌ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.

ಸ್ಥಳಾಂತರಗೊಂಡ ನವಗ್ರಾಮದಲ್ಲಿ ಎನ್‌ಆರ್‌ಇಜಿ ಯೋಜನೆಯಡಿ ಗ್ರಾಪಂನ ನೂತನ ಕಟ್ಟಡ ನಿರ್ಮಿಸಲಾಗಿದೆ. ಪಂಚಾಯಿತಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಆಕರ್ಷಿಸಲು ನಿರ್ಮಿಸಿದ ಉದ್ಯಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 12.5 ಲಕ್ಷ ರೂ. ವೆಚ್ಚದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಗುಂಪು ಚಟುವಟಿಕೆ ನಡೆಸಲು ವರ್ಕ್‌ಶೆಡ್, ಸ್ವಂತ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಮಕ್ಕಳ ಕಲಿಕೆಗೆ ಪೂರಕವಾಗಿ 2 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಯಾನ, 4 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಿಸಿದ್ದಾರೆ. 2020, 21ನೇ ಸಾಲಿನಲ್ಲಿಯೂ ಗಾಂಧಿ ಗ್ರಾಮ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಮತ್ತೆ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಭಿವೃದ್ಧಿ ಕಾಮಗಾರಿಗೆ ಪಕ್ಷಾತೀತವಾಗಿ ಸದಸ್ಯರು ಬೆಂಬಲ ನೀಡಿದ್ದಾರೆ. ಹಿಂದೆ ಪಿಡಿಒ ಆಗಿದ್ದ ಶಿವಾನಂದ ಉಪ್ಪಾರ ಅವರು, ಗ್ರಾಮ ವಿಕಾಸ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಕೈಗೊಂಡಿದ್ದರಿಂದ ಸತತ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ದೊರೆತಿತ್ತು. ಈಗ ಮೂರನೇ ಬಾರಿಯೂ ಪ್ರಶಸ್ತಿ ದೊರೆತಿರುವುದು ಖುಷಿಯ ವಿಚಾರ.-ಮಲ್ಲಪ್ಪ ವಾಲಿ. ಸುರಕೋಡ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net