

ಎನ್.ಆರ್.ಪುರ: ಟ್ಟಣ ಪಂಚಾಯಿತಿಯ ಎರಡನೇ ಅವಧಿ ಅಧ್ಯಕ್ಷರಾಗಿ ಸುರಯ್ಯಬಾನು ಹಾಗೂ ಉಪಾಧ್ಯಕ್ಷರಾಗಿ ಉಮಾ ಕೇಶವ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುರಯ್ಯಬಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮಾ ಕೇಶವ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಘೋಷಿಸಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರ ನಿರೀಕ್ಷಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸಬೇಕು. ನಿವೇಶನ ರಹಿತರಿಗೆ ಶೀಘ್ರ ನಿವೇಶನ ಹಂಚಲು ಕ್ರಮಕೈಗೊಳ್ಳಬೇಕು. ಪಟ್ಟಣ ಪಂಚಾಯಿತಿ ಕಚೇರಿಯನ್ನು ಜನಸ್ನೇಹಿಯಾಗಿ ರೂಪಿಸಬೇಕು. ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಪಟ್ಟಣವನ್ನು ಮಾದರಿಯಾಗಿಸಲು ಎಲ್ಲರ ಸಹಕಾರ ಪಡೆದು ಕೊಳ್ಳಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಮೂಲಕ ಕ್ಷಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು ಎಂದರು.
ಚುನಾವಣಾ ಶಿರಸ್ತೇದಾರ್ ವೇಣುಗೋಪಾಲ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಪಪಂ ಸದಸ್ಯರಾದ ಆರ್.ಕುಮಾರ್ ಸ್ವಾಮಿ, ಮುನಾವರ್ಪಾಷ, ಸೈಯದ್ ವಸೀಂ, ಶೋಜಾ, ಮುಕುಂದಾ, ಜುಬೇದಾ, ಕೆ.ಎಂ.ಸುಂದರೇಶ್, ಎಸ್.ಡಿ.ರಾಜೇಂದ್ರ, ಈ.ಸಿ.ಜೋಯಿ, ದೇವಂತ್ ಗೌಡ, ಸುನಿಲ್ ಕುಮಾರ್ ಮತ್ತಿತರರಿದ್ದರು.