

ನ್ಯಾಮತಿ: ಇಲ್ಲಿಗೆ ಸಮೀಪದ ಸೂರಗೊಂಡನಕೊಪ್ಪದಲ್ಲಿ ಫೆ.13 ರಿಂದ ಮೂರು ದಿನಗಳ ಕಾಲ ಶ್ರೀ ಸಂತ ಸೇವಾಲಾಲ್ 284ನೇ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಮುಖ್ಯಮಂತ್ರಿ, ವಿಪಕ್ಷ ನಾಯಕರು ಹಾಗೂ ಸಚಿವ, ಶಾಸಕರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪಕ್ಕೆ ಬರುವ ಭಕ್ತರಿಗೆ ಉಚಿತ ಪ್ರಯಾಣಕ್ಕಾಗಿ 150 ಆಟೋಗಳನ್ನು ಒದಗಿಸಲಾಗಿದೆ.
ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಾಲಯದ ಆವರಣದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದು, 800 (ಮೊಬೈಲ್) ಶೌಚಗೃಹ ಮತ್ತು ಸ್ನಾನ ಗೃಹ ನಿರ್ಮಿಸಲಾಗಿದೆ. ಮೂರು ದಿನಗಳ ಕಾಲ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.
ಸೇವಾಲಾಲ್ ಜಯಂತ್ಯುತ್ಸವ ಆಚರಣೆ, ಸಿದ್ಧತೆ ಸಂಬಂಧ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಹರಿಹರ, ಶಿವಮೊಗ್ಗ, ನ್ಯಾಮತಿ, ಶಿಕಾರಿಪುರ, ಹಿರೇಕೆರೂರು, ಚನ್ನಗಿರಿ ಸೇರಿ ರಾಜ್ಯದ ಎಲ್ಲ ಕಡೆಯಿಂದ ಭಕ್ತರು ಆಗಮಿಸಲಿದ್ದು, ಏನೂ ಕುಂದುಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಭೆಯ ಬಳಿಕ ಮುಖಂಡರು ಅಧಿಕಾರಿಗಳ ಜತೆ ವೇದಿಕೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಊಟದ ಕೌಂಟರ್, ಹೆಲಿಪ್ಯಾಡ್ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಗಿರೀಶ್‌ಬಾಬು, ತಾಪಂ ಇಒ ರಾಮಬೋವಿ, ಸಿಪಿಐ ರಾಘವೇಂದ್ರ ಖಾಂಡಿಕೆ, ಪ್ರಿಯಾ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಉಮಾ, ಬಂಜಾರ ಸಮಾಜದ ಪ್ರಮುಖರಾದ ರಾಘವೇಂದ್ರ ನಾಯ್ಕ, ಈಶ್ವರ್ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ ಇತರರಿದ್ದರು.
ಎರಡು ತಾತ್ಕಾಲಿಕ ಹೆಲಿಪ್ಯಾಡ್: ಫೆ.14ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕರು ಹಾಗೂ ಸಚಿವ-ಶಾಸಕರು ಆಗಮಿಸಲಿದ್ದಾರೆ. ಹೀಗಾಗಿ ಸೂರಗೊಂಡನಕೊಪ್ಪ ದೇವಸ್ಥಾನ ಆವರಣದ ಬಳಿ ತಾತ್ಕಾಲಿಕವಾಗಿ ಎರಡು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಮಲೇಬೆನ್ನೂರು, ಹೊನ್ನಾಳಿ, ನ್ಯಾಮತಿ, ಸವಳಂಗದಲ್ಲಿ ರಸ್ತೆಗಳಲ್ಲಿ ಬರುವ ಮಾಲಾಧಾರಿಗಳಿಗೆ ಮಾರ್ಗ ಮಧ್ಯೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯಕ್ ಹೇಳಿದರು.