ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ- ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ

mng-10jan-surabhi
Published on


ಮಂಗಳೂರು : ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಶಿಶು, ಬಾಣಂತಿ ಸಾವು, ಆಯುಷ್ಮಾನ್‌ನಡಿ ಚಿಕಿತ್ಸೆಗೆ ಅವಕಾಶ ಸಿಗದೆ ವೃದ್ಧರೋರ್ವರ ಆತ್ಮಹತ್ಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಕಾರಣ. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿರುವುದು ನಾಚಿಕಗೇಡಿನ ಸಂಗತಿ. ಬಾಣಂತಿಯರ ಸಾವು, ಔಷಧ ಪೂರೈಕೆಯಲ್ಲಿನ ನ್ಯೂನತೆಗಳ ಬಗ್ಗೆ ಮೊದಲೇ ವೈದ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷೃ ವಹಿಸಿದ್ದು ಎಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಹೇಳಿದರು.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ 70ಕ್ಕಿಂತ ಜಾಸ್ತಿ ವಯೋಮಾನದವರಿಗೆ ಜಾರಿಗೊಳಿಸಿದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕೆ
ಕಾರ್ಯರೂಪಕ್ಕೆ ತರುತ್ತಿಲ್ಲ. ಇದರಿಂದ ಬಡವರಿಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಆರೋಗ್ಯ ಸಚಿವರು ಕೇವಲ ಟ್ವೀಟ್‌ನಲ್ಲೆ ಮಗ್ನರಾಗಿರುವುದು ಬಿಟ್ಟರೆ, ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸಿಲ್ಲ. ಪಿಎಂ-ಆಯುಷ್ಮಾನ್ ಯೋಜನೆ ದೇಶದ 29 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿದ್ದರೂ ಕರ್ನಾಟಕ ರಾಜ್ಯ ಸೇರ್ಪಡೆಯಾಗಿಲ್ಲ. ಇದು ಕೂಡ ಕಾಂಗ್ರೆಸ್ ಸರ್ಕಾರದ ರಾಜಕೀಯಕ್ಕೆ ನಿದರ್ಶನವಾಗಿದೆ ಎಂದು ಅವರು ಆರೋಪಿಸಿದರು.
ಎಲ್ಲ ವಿಚಾರಕ್ಕೂ ಕೇಂದ್ರದತ್ತ ಕೈತೋರಿಸುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರಿಗೆ ಉಳಿದ ಬೆರಳುಗಳು ಕೂಡ ತಮ್ಮತ್ತ ತೋರಿಸುತ್ತವೆ ಎಂಬುದು ನೆನಪಿರಲಿ . ಎಲ್ಲದಕ್ಕೂ ಕೇಂದ್ರದ ಮೇಲೆ ಆರೋಪಿಸಿದರೆ, ನೀವು ಏನು ಮಾಡುತ್ತೀರಿ? ಮೊಂಡು ಬುದ್ಧಿಯ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಸತೀಶ್ ಪ್ರಭು, ಅರುಣ್ ಶೇಟ್, ಪ್ರಮುಖರಾದ ಡೊಂಬಯ್ಯ ಅರಳ, ವರುಣ್‌ರಾಜ್, ವಸಂತ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net