ಮೈಸೂರು: ಆಂಧ್ರಪ್ರದೇಶ ಸರ್ಕಾರದ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ನ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ನೀಡಿರುವ ಮಹತ್ವದ ತೀರ್ಪು ಸಾಮಾಜಿಕ ನ್ಯಾಯದ ಪರ ಇದೆ ಎಂದು ಸಾಮಾಜಿಕ ನ್ಯಾಯಪರ ವೇದಿಕೆಯ ವಕೀಲ ಎಸ್.ಅರುಣ್‌ಕುಮಾರ್ ಹೇಳಿದ್ದಾರೆ.
ಒಳ ಮೀಸಲಾತಿಯಿಂದ ಎಷ್ಟು ಸಣ್ಣ ಸಮುದಾಯಗಳಿಗೆ ಅನುಕೂಲವಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯದಲ್ಲಿ ಈಗಾಗಲೇ ಎಸ್.ಆರ್.ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಒಳ ಮೀಸಲಾತಿ ನೀಡಬಹುದು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತಾಗಿ ಸಂಪುಟ ಸಭೆ ಕರೆದು ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆ.1ರಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಒಳ ಮೀಸಲಾತಿ ನೀಡಬಹುದಾಗಿದೆ ಎಂದು ರಾಜ್ಯಗಳಿಗೆ ಪರಮಾಧಿಕಾರ ನೀಡಿದೆ. ಇದೇ ವೇಳೆ ರಾಜ್ಯದಲ್ಲಿ ಈ ಕುರಿತ ವೈಜ್ಞಾನಿಕ ಅಧ್ಯಯನದ ವರದಿ ಇದ್ದು, ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಕೋರಿದರು.
ಹಿರಿಯ ವಕೀಲರಾದ ದಾಸಯ್ಯ, ರಾಜೇಂದ್ರ, ರಾಜು ಇತರರು ಇದ್ದರು.