ಹೊನ್ನಾಳಿಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

23 HNL
Published on

ಶ್ರೀನಿವಾಸ್ ಟಿ. ಹೊನ್ನಾಳಿ

ಸರ್ವೋಚ್ಚ ನ್ಯಾಯಾಲಯದ ಆದೇಶ, ಲೋಕಾಯುಕ್ತರಿಂದ ನೊಟೀಸ್ ಜಾರಿ, ಸಾಮಾಜಿಕ ಕಾರ್ಯಕರ್ತರ ನಿರಂತರ ಮನವಿ ಹಾಗೂ ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ ಅವರ ಇಚ್ಛಾಶಕ್ತಿಯಿಂದ ತಾಲೂಕಿನಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಸದ್ದಿಲ್ಲದೆ ನಡೆಯುತ್ತಿದೆ.

ತಾಲೂಕಿನ 48 ಕೆರೆಗಳ ಪೈಕಿ 30 ಕೆರೆಗಳಲ್ಲಿ 45.39 ಎಕರೆ ಒತ್ತುವರಿಯಾದ ಬಗ್ಗೆ ಜಿಲ್ಲಾ ಲೋಕಾಯುಕ್ತರಿಗೆ ಮಾಹಿತಿ ದೊರೆತಿತ್ತು. ಶೀಘ್ರವೇ ಕೋರ್ಟ್‌ನ ಆದೇಶ ಪಾಲಿಸಿ ಒತ್ತುವರಿ ತೆರವುಗೊಳಿಸಿ ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಿ ಎಂದು ಕಳೆದ 2-3 ವರ್ಷಗಳಿಂದ ಲೋಕಾಯುಕ್ತ ಅಧಿಕಾರಿಗಳು ಪತ್ರ ವ್ಯವಹಾರ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ.

ಆದರೆ ಈಗ ತಹಸೀಲ್ದಾರ್ ಪಟ್ಟರಾಜಗೌಡ ಅವರಿಂದ ಒತ್ತುವರಿ ತೆರವು ಕಾರ್ಯಾಚರಣೆಗೆ ಜೀವ ಬಂದಿದೆ. ಕಳೆದ 6 ತಿಂಗಳಿನಿಂದ 30 ರ ಪೈಕಿ 10 ಕೆರೆಗಳನ್ನು ಮರು ಸರ್ವೇ ಮಾಡಿಸಲಾಗಿದೆ. ತಾಲೂಕಿನ ಸೊರಟೂರು, ಅರಕೆರೆ, ಕುಂದೂರು, ಚಿಕ್ಕಹಾಲಿವಾಣ, ಹಿರೇಬಾಸೂರು, ಕ್ಯಾಸಿನಕೆರೆ, ಹೊಳೆಮಾದಾಪುರ, ಘಂಟ್ಯಾಪುರ ಸೇರಿ 10 ಗ್ರಾಮದಲ್ಲಿನ ಕೆರೆಯ 13.4 ಎಕರೆ ಜಾಗವನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕೆರೆ ಒತ್ತುವರಿ ಬಗ್ಗೆ ವಿಜಯವಾಣಿ ಪತ್ರಿಕೆ ‘ಕೆರೆ ಕಾಳಜಿ’ ಸರಣಿ ವರದಿಯಲ್ಲಿ ಗಮನ ಸೆಳೆದಿತ್ತು.

ಸರ್ಕಾರದ ಒತ್ತುವರಿ ಜಾಗವನ್ನು ತೆರವುಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಹೊನ್ನಾಳಿ ತಾಲೂಕಿನ ಕೆರೆಗಳ ಸರ್ವೇ ಮಾಡಿ, ಒತ್ತುವರಿ ತೆರವುಗೊಳಿಸಿ ಸುಮಾರು 13 ಎಕರೆ ಜಾಗವನ್ನು ಸಂಬಂಧಿತ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇನ್ನೂ 20 ಕೆರೆಗಳ ಒತ್ತುವರಿ ತೆರವು ಮುಂದುವರಿದಿದೆ. ಉಳಿದ 31.99 ಎಕರೆ ಜಾಗ ತೆರವುಗೊಳಿಸುವುದು ಬಾಕಿ ಇದೆ. ಪಟ್ಟರಾಜಗೌಡ, ತಹಸೀಲ್ದಾರ್ ಹೊನ್ನಾಳಿ. 2017 ರಿಂದ ತಾಲೂಕಿನ ಎಲ್ಲ ಕೆರೆಗಳು ಹಾಗೂ ವಿಶೇಷವಾಗಿ ಕುಂದೂರು ಕೆರೆ ಒತ್ತುವರಿಯಾಗಿದೆ. ಕೂಡಲೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೆರೆ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದನೆ ದೊರೆತಿದೆ. ಪ್ರಸನ್ನಕುಮಾರ್, ಸಾಮಾಜಿಕ ಕಾರ್ಯಕರ್ತ ಕುಂದೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net