

ಮೈಸೂರು; ನಗರದ ಗೌನ್‌ಹೌಸ್ ವೃತ್ತದಲ್ಲಿ ಇಟ್ಟಿರುವ ಪ್ರತಿಮೆಯನ್ನು ಅನಾವರಣ ಮಾಡದಂತೆ ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ಅರಸು ಮಂಡಳಿ ಹಾಗೂ ಸರ್ವಜನಾಂಗದ ಸಮಿತಿ ತಿಳಿಸಿದೆ.
ಅರಸು ಮಂಡಳಿ ಕಚೇರಿಯಲ್ಲಿ ನಗರದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಅರಸು ಮಂಡಳಿಯ ಕಾನೂನು ಸಲಹೆಗಾರ ವೈ.ಎಂ.ಕಿರಣ್ ಮಾಹಿತಿ ನೀಡಿದರು.
ವಕೀಲ ಸಿ.ಎಂ. ಸುಬ್ರಮಣ್ಯ ಅವರು ಸುಪ್ರೀಂಕೋರ್ಟ್‌ಗೆ ವಿಶೇಷ ರಜೆ ಅರ್ಜಿಯನ್ನು (ಎಸ್‌ಎಲ್‌ಪಿ ಸಂಖ್ಯೆ 928/2024) ಜ. 8ರಂದು ಸಲ್ಲಿಸಿದ್ದರು. ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರತಿಮೆ ಅನಾವರಣಕ್ಕೆ ಶುಕ್ರವಾರ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಮುಂದೂಡಿದೆ ಎಂದು ತಿಳಿಸಿದರು.
ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ. ಲಿಂಗರಾಜು ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ ಮಾಡಬಾರದೆಂದು 2012ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅರಮನೆ ದಕ್ಷಿಣ ದ್ವಾರದಲ್ಲಿರುವ ಗನ್‌ಹೌಸ್ ವೃತ್ತದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ನಾವು 2015ರಲ್ಲಿ ಅರ್ಜಿ ಸಲ್ಲಿಸಿದ್ದೆವು.
ಆದರೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಮ್ಮ ಅರ್ಜಿಯನ್ನು ಮೈಸೂರು ಮಹಾನಗರ ಪಾಲಿಕೆ ತಿರಸ್ಕರಿಸಿತ್ತು. ನಂತರ ಅದೇ ಜಾಗದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ 2017ರಲ್ಲಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಪಾಲಿಕೆ ಅನುಮತಿ ನೀಡಿದೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನಿಸಿದರು.
ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ಹೈಕೋರ್ಟ್, ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ 2021ರಿಂದ 2023ರ ವರೆಗೆ 6 ಸಭೆ ನಡೆಸಿದೆ. ಈ ಸಮಿತಿ ಪ್ರತಿಮೆ ನಿರ್ಮಾಣ ಮಾಡಬಹುದು ಎಂಬ ಶಿಫಾರಸು ಮಾಡಿತ್ತು. ಇದರ ಆಧಾರದಲ್ಲೇ ಹೈಕೋರ್ಟ್‌ನಿಂದ ಅಂತಿಮ ತೀರ್ಪು ಪ್ರಕಟಗೊಳ್ಳುವ ಮುನ್ನವೇ ಪ್ರತಿಮೆಯನ್ನು ರಾತ್ರೋರಾತ್ರಿ ನಿರ್ಮಿಸಲಾಗಿದೆ. ಇದು ಕಾನೂನು ಬಾಹಿರ, ಅಕ್ರಮ ಮತ್ತು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಈ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿಕೊಂಡು ರಾತ್ರಿ ಹೊತ್ತಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಪೊಲೀಸರಿಗೆ ಮನವಿ ಸಲ್ಲಿಸಿದರೂ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಪಡುವಾರಹಳ್ಳಿಯ ಮಾತೃಮಂಡಳಿ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಆದೇಶ ಅಡ್ಡಿಯಾಗುತ್ತದೆ. ಅದೇ ತೀರ್ಪು ಗನ್‌ಹೌಸ್ ವೃತ್ತದಲ್ಲಿ ಅನ್ವಯವಾಗುವುದಿಲ್ಲವೇ? ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.
ಪ್ರತಿಮೆ ವಿಚಾರವಾಗಿ ನಗರದಲ್ಲಿ ಅಶಾಂತಿ, ಗೊಂದಲ ಸೃಷ್ಟಿ ಮಾಡಬಾರದು. ಹೀಗಾಗಿ, ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.
ಕರುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ. ಪ್ರೇಮ್‌ಕುಮಾರ್ ಮಾತನಾಡಿ, ಪ್ರತಿಮೆ ವಿಷಯವಾಗಿ ಸರಣಿ ಪ್ರತಿಭಟನೆಗಳು ನಡೆದಿವೆ. ಆದರೆ ಸಚಿವರು, ಶಾಸಕರು, ಸಂಸದರು ಸೌಜನ್ಯಕ್ಕೂ ಪ್ರತಿಕ್ರಿಯಿಸಿಲ್ಲ. ಸಮಸ್ಯೆ ಬಗೆಹರಿಸಲೂ ಮುಂದೆ ಬಂದಿಲ್ಲ. ಇದೇ ಕೆಲಸವನ್ನು ಸಾಮಾನ್ಯ ಪ್ರಜೆಯೊಬ್ಬರು ಮಾಡಿದ್ದರೆ ಹೀಗೆ ಎಲ್ಲರೂ ಮೌನವಾಗಿ ಇರುತ್ತಿದ್ದರೆ ಎಂದು ಕುಟುಕಿದರು.
ಅಕ್ರಮವಾಗಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳು, ಪೊಲೀಸರ ಕಾರ್ಯವೈಖರಿ ಕುರಿತು ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಒಕ್ಕಲಿಗರ ಸಂಘದ ಯಮುನಾ ಇದ್ದರು.