ಸುಪ್ರೀತ್ ಎಸ್.ತೆಲಗಾಡಿ ಜಿಲ್ಲೆಯ ಯುವ ವಿಜ್ಞಾನಿ

Vijnaana Yuva Prashasti
Published on

ಚಿಕ್ಕಮಗಳೂರು: ಶೃಂಗೇರಿ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಪ್ರೀತ್ ಎಸ್.ತೆಲಗಾಡಿ ಜಿಲ್ಲಾಮಟ್ಟದ ಯುವವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಬಿಜಿಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಜಿ.ಸಿ.ನಿತನ್ ದ್ವಿತೀಯ ಸ್ಥಾನಕ್ಕೆ ಪಾತ್ರರಾದರು.

ನಗರದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮುದ್ರದ ಉಬ್ಬರ-ಇಳಿತಗಳಿಂದ ವಿದ್ಯುಚ್ಛಕ್ತಿ ತಯಾರಿಕೆ ಬಗ್ಗೆ ಸುಪ್ರೀತ್ ಆವಿಷ್ಕಾರ ಮಾಡಿದ್ದರೆ, ನಿತನ್ ಸೋಲಾರ್ ಪ್ಯಾನಲ್‍ಗಳ ಮರು ಬಳಕೆ ಬಗ್ಗೆ ಪ್ರದರ್ಶನ ನೀಡಿದ್ದಾರೆ. ಸುಮಾರು 25 ವಿದ್ಯಾರ್ಥಿಗಳು ತಮ್ಮ ವಿಜ್ಞಾನದ ಸಂಬಂಧಪಟ್ಟ ಮಾದರಿಗಳನ್ನು ಪ್ರದರ್ಶಿಸಿ ವಿವರಣೆ ನೀಡಿದರು. ಇದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಯಿತು. ಅನಂತರ ನಡೆದ ಸಮಾರಂಭದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷಿ ನೀರಾವರಿಗೆ ಸೂರ್ಯನ ಶಕ್ತಿಯ ಬಳಕೆ, ಮಾನವನ ಜೀರ್ಣಕ್ರಿಯೆ, ಮಾನವನ ಉಸಿರಾಟ ಕ್ರಿಯೆ, ಸುಸ್ಥಿರ ಜೀವನಕ್ಕಾಗಿ ನೈಸರ್ಗಿಕ ಶಕ್ತಿಯ ಬಳಕೆ, ದ್ವಿಚಕ್ರ ಕಳೆ ಕತ್ತರಿಸುವ ಯಂತ್ರ, ನೀರಿನ ಅಲೆಗಳಿಂದ ವಿದ್ಯುತ್ ಉತ್ಪಾದನೆ, ಕಾಫಿ ಪಲ್ಪರ್‍ನಿಂದ ಇಂಧನ ಉತ್ಪಾದನೆ ಸೇರಿದಂತೆ ಹಲವು ಮಾದರಿಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದವು.

ವಿಜ್ಞಾನದ ಆವಿಷ್ಕಾರ ಒಳಿತಿಗೆ ಬಳಕೆಯಾಗಬೇಕು: 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ವಿಜ್ಞಾನದ ಆವಿಷ್ಕಾರಗಳಿಂದ ಮನುಕುಲದ ಅಭಿವೃದ್ಧಿಯಾಗಬೇಕೆ ವಿನಃ ಅದು ವಿನಾಶಕ್ಕೆ ಕಾರಣವಾಗಬಾರದು ಎಂದು ಸಲಹೆ ನೀಡಿದರು. ಮನುಕುಲದ ಏಳಿಗೆಗಾಗಿರುವ ವಿಜ್ಞಾನದ ಆವಿಷ್ಕಾರಗಳನ್ನು ನಾವು ಒಳಿತಿಗೆ ಮಾತ್ರ ಬಳಸಿಕೊಳ್ಳಬೇಕು. ನಿಸರ್ಗದಿಂದ ಉತ್ಪಾದನೆಯಾಗುವ ಆವಿಷ್ಕಾರಗಳನ್ನು ಹೆಚ್ಚಾಗಿ ಬಳಸಬೇಕು. ಜಗತ್ತು ಇಂದು ಆಧುನಿಕವಾಗಿ ಬಹಳಷ್ಟು ಮುಂದುವರಿದಿದ್ದು, ಅದನ್ನರಿತು ವಿದ್ಯಾರ್ಥಿಗಳು ವಿಜ್ಞಾನ ವಿಷಯದತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಜೆ.ಕೃಷ್ಣಮೂರ್ತಿರಾಜ್ ಅರಸ್ ಪ್ರಾಸ್ತಾವಿಕ ಮಾತನಾಡಿ ಮಕ್ಕಳು ವಿಜ್ಞಾನಿಗಳಾಗಿ ಮುಂದುವರೆಯಲು ಪ್ರೇರಣೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಸುರೇಂದ್ರ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲಾಗುತ್ತಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ರಾಜಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ್, ಜಿಲ್ಲಾ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಚ್.ಎಂ.ಓಂಕಾರಪ್ಪ, ಎಚ್.ಎಂ.ನೀಲಕಂಠಪ್ಪ, ವಿಜ್ಞಾನ ಕೇಂದ್ರದ ಖಜಾಂಚಿ ಕೆ.ಜಿ.ನೀಲಕಂಠಪ್ಪ, ಕಾರ್ಯದರ್ಶಿ ಟಿ.ತ್ಯಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.ಸ್ಪರ್ಧೆಯ ತೀರ್ಪುಗಾರರಾಗಿ ರಾಸಾಯನಶಾಸ್ತ್ರ ಉಪನ್ಯಾಸಕ ವಸಂತ್‍ಕುಮಾರ್ ಮತ್ತು ಜೀವಶಾಸ್ತ್ರ ಉಪನ್ಯಾಸಕ ಶ್ರೀನಿವಾಸ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net