ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳ ವಿಕಸನಕ್ಕೆ ಪೂರಕ : ಪಿಜಿಆರ್ ಸಿಂಧ್ಯಾ

Scouts and Guides
Published on

ಮೈಸೂರು: ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳ ವಿಕಸನಕ್ಕೆ ಪೂರಕವಾದ ಅಂಶಗಳು ಇರುವುದನ್ನು ಗಮನಿಸಿ ಎಲ್ಲ ರಾಜ್ಯಗಳಲ್ಲೂ ಸಂಸ್ಥೆಯನ್ನು ಪ್ರಾರಂಭಿಸುವಂತೆ ಕೇಂದ್ರ ಹಾಗೂ ನೀತಿ ಆಯೋಗ ನಿರ್ದೇಶನ ನೀಡಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ವಿವಿಧ ರಾಜ್ಯಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಹೆಚ್ಚಿನ ಮಾನ್ಯತೆ ದೊರೆಯುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಕಾಲದಿಂದಲೇ ಸ್ಕೌಟ್ಸ್ ಮತ್ತು ಗೈಡ್ಸ್‌ಅನ್ನು ಶಾಲಾ, ಕಾಲೇಜುಗಳಲ್ಲಿ ಪರಿಚಯಿಸಲಾಯಿತು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದುಳಿಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತಿತ್ತು. ಆದರೆ, ಈ ಬಾರಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಸಂಸ್ಥೆಯ ಮೇಲಿರುವ ತಪ್ಪು ಕಲ್ಪನೆಗಳು ದೂರವಾಗಿದೆ. 2 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶೇ.93 ರಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದರು.

ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಹಾಗೂ ಕೌಶಲ ಪೂರಿತ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಆ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಯಶಸ್ವಿಯಾಗಿ ಮಾಡುತ್ತಿದೆ. ಎಲ್ಲ ಶಾಲಾ, ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರಂಭಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ನಿವೃತ್ತ ಡಿಡಿಪಿಐ ಬಸವರಾಜ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಪಿ.ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಮೀಲ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net