

ಚಿಕ್ಕಬಳ್ಳಾಪುರ: ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಗಂಗರೇಕಾಲುವೆ ಪ್ರಸಾದ್, ಉಪಾಧ್ಯಕ್ಷರಾಗಿ ರಾಮಪ್ಪ ಅವಿರೋಧ ಆಯ್ಕೆಯಾಗಿದ್ದು ನಗರಸಭೆ ಬಳಿಕ ರೈತರ ಬ್ಯಾಂಕನ್ನು ಸಂಸದ ಡಾ ಕೆ.ಸುಧಾಕರ್ ಬಣವು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಸ್ಪಷ್ಟ ಬಹುಮತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಉಮೇದುವಾರಿಕೆಯನ್ನು ಸಲ್ಲಿಸಲಿಲ್ಲ. ಇದರಿಂದ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಬ್ಯಾಂಕಿನ ಎಲ್ಲ 12 ಕ್ಷೇತ್ರಗಳನ್ನು ಸಂಸದರ ಬಣವು ತನ್ನದಾಗಿಸಿಕೊಂಡಿದೆ. ಮೊದಲು ರಾಜೀ ಸಂಧಾನದ ಮೂಲಕ 5 ಕ್ಷೇತ್ರಗಳ ನಿರ್ದೇಶಕರ ಆಯ್ಕೆಯಾದರೆ, ಉಳಿದಂತೆ 7 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.
*ಪ್ರಾರಂಭದಲ್ಲಿ ಪೈಪೋಟಿ
ಕಳೆದ ಒಂದೂ ವರೆ ದಶಕದಿಂದ ಬ್ಯಾಂಕನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಸುಧಾಕರ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಶಾಸಕ ಪ್ರದಿಪ್ ಈಶ್ವರ್ ಅಯ್ಯರ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಪ್ರಾಬಲ್ಯವನ್ನು ಮೆರೆಯಲು ಕಸರತ್ತು ನಡೆಸಿದ್ದರು. ಹೆಚ್ಚಿನ ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ರಹಸ್ಯ ಸಭೆಗಳನ್ನು ನಡೆಸಿ, ಚರ್ಚಿಸಿ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದರು. ಒಂದು ಹಂತದಲ್ಲಿ ನಂದಿ ನಿರ್ದೇಶಕ ಸ್ಥಾನ ವಿವಾದವನ್ನು ಮುಂದಿಟ್ಟುಕೊಂಡು ಚುನಾವಣೆಗೆ ತಡೆ ತರಲು ನ್ಯಾಯಾಲಯದ ಮೆಟ್ಟಿಲೇರುವುದರ ಬಗ್ಗೆಯೂ ಚಿಂತಿಸಲಾಗಿತ್ತು. ಇದಕ್ಕೆ ಕೆಲ ನಿರ್ದೇಶಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ, ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಅಡ್ಡಿಯನ್ನುಂಟು ಮಾಡಬಾರದು ಎಂದು ಒತ್ತಾಯಿಸಿದ್ದರು. ಇದರ ನಡುವೆ ಯಾವುದೇ ಪೈಪೋಟಿಯಿಲ್ಲದೇ ಪ್ರಕ್ರಿಯೆ ನಡೆದಿದ್ದು ಇದರಲ್ಲಿ ಕೊನೆಗೆ ಸಂಸದರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.