ಕಾಟನ್ ಖರೀದಿಗೆ ಚಾಲನೆ

25 lxr 2.a
Published on

ಲಕ್ಷ್ಮೇಶ್ವರ: ಭಾರತೀಯ ಹತ್ತಿ ನಿಗಮ (ಸಿಸಿಐ)ದಿಂದ ಬೆಂಬಲ ಬೆಲೆಯಡಿ ಹತ್ತಿ ಖರೀದಿ ಪ್ರಕ್ರಿಯೆಗೆ ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ಕೇಂದ್ರ ಸರ್ಕಾರದ ಘೊಷಣೆಯಂತೆ ಕಳೆದ 2 ವರ್ಷದಿಂದ ಸಿಸಿಐ ವತಿಯಿಂದ ಲಕ್ಷ್ಮೇಶ್ವರದಲ್ಲಿ ಬೆಂಬಲ ಬೆಲೆಯಡಿ ಹತ್ತಿ ಖರೀದಿಸಲಾಗುತ್ತಿದೆ. ಕಳೆದ ವರ್ಷ ಸಾವಿರಾರು ಕ್ವಿಂಟಾಲ್ ಹತ್ತಿ ಖರೀದಿಸಲಾಗಿದ್ದು, ಲಕ್ಷ್ಮೇಶ್ವರ ತಾಲೂಕಷ್ಟೇ ಅಲ್ಲದೆ ನೆರೆಯ ಕುಂದಗೋಳ, ಶಿಗ್ಗಾಂವಿ, ಸವಣೂರ ತಾಲೂಕಿನ ರೈತರಿಗೂ ಇಲ್ಲಿನ ಖರೀದಿ ಕೇಂದ್ರದಿಂದ ಅನುಕೂಲವಾಗಲಿದೆ. ರೈತರು ಬೆಂಬಲ ಬೆಲೆಯ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಮಾರಾಟಕ್ಕೆ ಬಂದ ವೇಳೆ ಕರೊನಾ ಕುರಿತು ಮುಂಜಾಗ್ರತೆ ವಹಿಸಬೇಕು’ ಎಂದರು.

ಸಿಸಿಐ ಅಧಿಕಾರಿ ಶಕ್ತಿವೇಲ್ ಡಿ ಮಾತನಾಡಿ, ಮಾರಾಟಕ್ಕೆ ತರುವ ಮುನ್ನ ಹತ್ತಿಯನ್ನು ಸ್ವಚ್ಛಗೊಳಿಸಿರಬೇಕು. ಅಲ್ಲದೆ ಸೂಕ್ತ ದಾಖಲೆಗಳೊಂದಿಗೆ ಖುದ್ದಾಗಿ ರೈತರೇ ಬರಬೇಕು. ಗುಣಮಟ್ಟವಿಲ್ಲದ ಹತ್ತಿ ಖರೀದಿಸದಂತೆ ನಿಗಮ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ರೈತರು ಸಹಕರಿಸಬೇಕು ಎಂದರು.

ಉದ್ಯಮಿ ಲೋಹಿತ ನೆಲವಗಿ, ಮಂಜನಗೌಡ ಕೆಂಚನಗೌಡ್ರ, ಚಂದ್ರಶೇಖರ ತಳವಾರ, ವೆಂಕನಗೌಡ ಪಾಟೀಲ, ಬಸವರಾಜ ಹೊಳಲಾಪುರ, ಆನಂದ ಮುಂಜಿ, ದಿವಾಕರ ಬಡಿಗೇರ, ಬಸವರಾಜ ಮೇಟಿ, ಮಂಜಪ್ಪ ಹೂಗಾರ ಇತರರು ಇದ್ದರು.

ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ ಹಾಗೂ ಶುಕ್ರವಾರ) ಹತ್ತಿ ಖರೀದಿಸಲಾಗುವುದು. ಪ್ರತಿ ಕ್ವಿಂಟಾಲ್​ಗೆ 5,775 ರೂ. ದರ ನಿಗದಿಪಡಿಸಲಾಗಿದೆ. ಬುಧವಾರ 22 ರೈತರಿಂದ 24.50ಲಕ್ಷ ರೂ. ಮೌಲ್ಯದ 435 ಕ್ವಿಂಟಾಲ್ ಹತ್ತಿ ಖರೀದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ 30ಕ್ಕೂ ಹೆಚ್ಚು ರೈತರು ಹತ್ತಿಯನ್ನು ಮಾರಾಟಕ್ಕೆ ತಂದಿದ್ದರು. ಅದರಲ್ಲಿ ಕೆಲ ರೈತರ ಹತ್ತಿಯ ಗುಣಮಟ್ಟ ಇಲ್ಲದ ಕಾರಣ ತಿರಸ್ಕರಿಸಲಾಗಿದೆ.

ಗದಗದಲ್ಲಿ ಇಂದಿನಿಂದ: ಬೆಂಬಲ ಬೆಲೆ ಯೋಜನೆಯಡಿ ಭಾರತೀಯ ಹತ್ತಿ ನಿಗಮವು ನ. 26ರಿಂದ ಹತ್ತಿ ಖರೀದಿಸಲಿದೆ. 29 ಎಂಎಂ ಗುಣಮಟ್ಟವುಳ್ಳ ಹತ್ತಿಗೆ ಪ್ರತಿ ಕ್ವಿಂಟಾಲ್​ಗೆ 5,775 ರೂ. ದರ ನಿಗದಿಪಡಿಸಲಾಗಿದೆ. ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಮತ್ತು ಶನಿವಾರ) ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಮಾರ್ಕೆಟಿಂಗ್ ಫೆಡರೇಷನ್ ಗೋದಾಮಿನ ಮುಂಭಾಗದಲ್ಲಿ್ಲ ಖರೀದಿ ಪ್ರಕ್ರಿಯೆ ನಡೆಯಲಿದೆ. ಪಹಣಿಯಲ್ಲಿ ಹೆಸರುಳ್ಳ ರೈತರೇ ಹತ್ತಿ ಮಾರಾಟಕ್ಕೆ ಬರಬೇಕು. ಜತೆಗೆ ಉತಾರ, ಬ್ಯಾಂಕ್ ಪಾಸ್​ಬುಕ್, ಆಧಾರ ಕಾರ್ಡ್ ಪ್ರತಿ ಹಾಗೂ ಬೆಳೆ ದೃಢೀಕರಣ ಪ್ರಮಾಣಪತ್ರ ತರಬೇಕು ಎಂದು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net