

ಹುಬ್ಬಳ್ಳಿ: ರಾಜ್ಯದಲ್ಲಿ ಲವ್ ಜಿಹಾದ್, ಆತ್ಮಹತ್ಯೆ ಹಾಗೂ ಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಇದಕ್ಕೆ ಕಾಂಗ್ರೆಸ್‌ನವರು ಮತಾಂಧ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದೆ ಮೂಲ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಹುಬ್ಬಳ್ಳಿಯಲ್ಲಿ ನಿನ್ನೆ ದಲಿತ ಸಮುದಾಯದ ಅಪ್ರಾಪ್ತೆಯನ್ನು ಸದ್ದಾಂ ಹುಸೇನ್ ಎಂಬಾತ ಅತ್ಯಾಚಾರ ಎಸಗಿದ ಪ್ರಕರಣವೇ ಸಾಕ್ಷಿ. ಇದು ಸಹ ಲವ್‌ಜಿಹಾದ್ ಪ್ರಕರಣದ ಭಾಗ ಎಂದು ಹರಿಹಾಯ್ದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರು ಹಾಗೂ ನೇಹಾ ಹತ್ಯೆ ಆರೋಪಿಗಳನ್ನು ತಕ್ಷಣ ಜೈಲಿಗೆ ಹಾಕಿದ್ದರೆ ಇಂತಹ ಪರಿಸ್ಥಿತಿ ರಾಜ್ಯದಲ್ಲಿ ಬರುತ್ತಿರಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮತಬ್ಯಾಂಕ್‌ಗಾಗಿ ತೃಷ್ಟೀಕರಣ ರಾಜಕೀಯ ಮಾಡಿದ್ದರಿಂದ ಇಂತಹ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇರಳ ಮಾದರಿ ರಾಜ್ಯವಾಗುತ್ತಿದೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಂಡಿದೆ. ಸದ್ಯ ಚುನಾವಣಾ ಪ್ರಚಾರದಲ್ಲಿ ಪೆನ್ ಡ್ರೈವ್ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ನಾವು ಬೆಂಬಲಿಸುವುದಿಲ್ಲ ಖಂಡಿಸಿದ್ದೇವೆ ಎಂದರು.
ಕೇಂದ್ರ ಗೃಹ ಮಂತ್ರಿ ಅಮಿತ್‌ಷಾ ಅವರು ಈ ಪ್ರಕರಣವನ್ನು ಬೆಂಬಲಿಸಿಲ್ಲ. ಅವರೂ ಖಂಡಿಸಿದ್ದಾರೆ. ಪೆನ್‌ಡ್ರೈವ್ ಪ್ರಕರಣವು ಮತದಾನದ ಹಿಂದಿನ ದಿನ ಹೊರಗೆ ಬಂದಿದೆ. ಇದುವರೆಗೆ ತಡೆಹಿಡಿದವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಪೆನ್‌ಡ್ರೈವ್ ಕುರಿತಂತೆ ನನಗೆ ಹಾಸನದಿಂದ ಯಾರೂ ಪತ್ರ ಕೂಡ ಬರೆದಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.