

ಚನ್ನರಾಯಪಟ್ಟಣ: ಹಿರಿಯರು ದೂರದೃಷ್ಟಿಯಿಂದ ನಿರ್ಮಾಣ ಮಾಡಿರುವ ಬಹುತೇಕ ಕಲ್ಯಾಣಿಗಳು ಕಸ ತುಂಬುವ ತೊಟ್ಟಿಗಳಾಗಿದ್ದು, ಅವುಗಳನ್ನು ಪುನರುಜ್ಜೀವನಗೊಳಿಸಲು ಸಮುದಾಯ ಮುಂದಾಗಬೇಕು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ ತಿಳಿಸಿದರು.
ಹೋಬಳಿ ಬೂದಿಗೆರೆ ಗ್ರಾಪಂನ ಹಿತ್ತರಹಳ್ಳಿಯಲ್ಲಿ ನರೇಗಾ ಹಾಗೂ ಸಮಾಜ ಸೇವಕರ ಸಹಕಾರದಿಂದ ಅಭಿವೃದ್ಧಿ ಪಡಿಸಿರುವ ಕಲ್ಯಾಣಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣಿಗಳು ಹಳ್ಳಿಗಳ ಜೀವನಾಡಿ. ಕೆರೆ, ಕುಂಟೆ ಜತೆಯಲ್ಲಿ ಬಹುತೇಕ ಕಡೆಗಳಲ್ಲಿ ಕಲ್ಯಾಣಿಗಳನ್ನು ಮೂಲೆಗುಂಪು ಮಾಡಲಾಗಿದೆ. ಇದರಿಂದ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅನುದಾನ ಹಾಗೂ ಜನರ ಸಹಕಾರದಲ್ಲಿ ಕಲ್ಯಾಣಿಗಳು, ಕುಂಟೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಉಳಿಸಲು ಸಾಧ್ಯ ಎಂದರು.
ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್ ಮಾತನಾಡಿ, ಹಳ್ಳಿಗಳು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರವೇ ದೇಶದ ಪ್ರಗತಿ. ನರೇಗಾ ಯೋಜನೆಯಿಂದಾಗಿ ಹಳ್ಳಿ ಹಳ್ಳಿಯಲ್ಲೂ ಅನೇಕ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದರು.
ಸರ್ಕಾರದಿಂದ ಗ್ರಾಪಂಗೆ ಬಿಡುಗಡೆಯಾಗುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸಮುದಾಯ ಮುಂದೆ ಬಂದಾಗ ಮಾತ್ರ ಇಂತಹ ಉತ್ತಮ ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ. ಜನರೂ ಕೂಡಾ ಪಂಚಾಯಿತಿಗೆ ನಿಗದಿತವಾಗಿ ತೆರಿಗೆ ಕಟ್ಟಬೇಕು ಎಂದರು.
ಬೂದಿಗೆರೆ ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಮಾತನಾಡಿ, ಸರ್ಕಾರ, ಅಂತರ್ಜಲ ವೃದ್ಧಿಗಾಗಿ ಜಲಾಮೃತ ಕಾರ್ಯಕ್ರದ ಮೂಲಕದ ಜನರಿಗೆ ನೀರಿನ ಬಗ್ಗೆ ಅರಿವು ಮೂಡಿಸುತ್ತಿದೆ ಎಂದರು.
ಜಿಪಂ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಬೂದಿಗೆರೆ ವಿಎಸ್‌ಎಸ್‌ಎನ್ ಅಧ್ಯಕ್ಷ ಆರ್.ಲಕ್ಷ್ಮಣಗೌಡ, ಮಾಜಿ ಅಧ್ಯಕ್ಷ ಹಿತ್ತರಹಳ್ಳಿ ರಮೇಶ್, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ತಾಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್, ಬೂದಿಗೆರೆ ಗ್ರಾಪಂ ಸದಸ್ಯ ಗಜೇಂದ್ರ, ಶಾರದಮ್ಮ ಸೀನಪ್ಪ, ಶಾರದದೇವಿ ಅನಂದ್, ಸಿ.ನಟರಾಜ್, ಕೆ.ರಾಮಮೂರ್ತಿ, ನಲ್ಲೂರು ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ವಿಶ್ವನಾಥ್, ಮುಖಂಡ ರಾಮಕೃಷ್ಣಪ್ಪ,ಎಸ್.ಮುನಿಯಪ್ಪ ಇದ್ದರು.