

ತುಮಕೂರು: ರೈತರಿಂದ ನೆಡ್ ಮೂಲಕ 10300 ರೂ. ಬೆಂಬಲ ಬೆಲೆಗೆ ಕೊಂಡುಕೊಳ್ಳುವ ಕೊಬ್ಬರಿಗೆ 1 ಸಾವಿರ ರೂ. ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಡಿಸಿಎಂ ಲಕ್ಷ್ಮಣಸವದಿ ನೇತೃತ್ವದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥಿರೀಕರಣದ ಸಚಿವ ಸಂಪುಟ ಉಪಸಮಿತಿ ನಿರ್ಧಾರ ತೆಗೆದುಕೊಂಡು ತೆಂಗು ಸೀಮೆ ಜನರಿಗೆ ತುಸು ಸಮಾಧಾನ ತಂದಿದೆ. ಸಮಿತಿಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗೃಹಸಚಿವ ಬಸವರಾಜ ಬೊಮ್ಮಾಯಿ, ಆಹಾರ ಸಚಿವ ಗೋಪಾಲಯ್ಯ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ನಿರ್ಧಾರವನ್ನು ಅನುಮೋದಿಸಿದ್ದಾರೆ.
ಉಂಡೆ ಕೊಬ್ಬರಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರ 10300ರೂ. ಬೆಂಬಲ ಬೆಲೆ ೋಷಿಸಿದ್ದು, ನೆಡ್ ಮೂಲಕ ಖರೀದಿಗೆ ಸಿದ್ಧತೆ ನಡೆದಿದೆ.ಈ ಮಹತ್ವದ ನಿರ್ಧಾರದಿಂದ ರೈತರಿಗೆ ಕ್ವಿಂಟಲ್‌ಗೆ 11300ರೂ. ದೊರೆಯಲಿದ್ದು, ರಾಜ್ಯ ಸರ್ಕಾರಕ್ಕೆ 38 ಕೋಟಿ ರೂಪಾಯಿ ಮಾತ್ರ ಹೊರೆ ಯಾಗಲಿದೆ, ತುಮಕೂರು, ಹಾಸನ, ಚಿತ್ರದುರ್ಗ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಯಾಗಿದ್ದು ಈ ರೈತರಿಗೆ ನೆರವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ 9575ರೂ.ಗಳಿದ್ದು ನೆಡ್ 11300ರೂ.ಗೆ ಖರೀದಿ ಆರಂಭಿಸಿದರೆ ಸಹಜವಾಗಿಯೇ ವರ್ತಕರು ಮಾರುಕಟ್ಟೆಯಲ್ಲಿ ಸ್ಫರ್ಧೆಗಳಿಯಬೇಕಿದ್ದು ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ಕ್ವಿಂಟಾಲ್ ಕೊಬ್ಬರಿ ಉತ್ಪಾದನಾ ವೆಚ್ಚ 11529 ರೂ. ಆಗುತ್ತದೆ ಎಂದು ಕೃಷಿ ಬೆಲೆ ಆಯೋಗ ವರದಿ ನೀಡಿದ್ದು, ಅದಕ್ಕೆ ಹೋಲಿಸಿದರೆ 10300 ರೂ. ಬೆಂಬಲ ಬೆಲೆಯೂ 1229ರೂ.ನಷ್ಟದಲ್ಲಿತ್ತು. ರಾಜ್ಯ ಸರ್ಕಾರದ 1 ಸಾವಿರ ರೂ. ಸೇರಿ ಉತ್ಪಾದನಾ ವೆಚ್ಚದ ಹತ್ತಿರಕ್ಕಾದರೂ ಬೆಲೆ ಮುಟ್ಟಲಿದೆ.
ಮಾತು ಉಳಿಸಿಕೊಂಡ ಮಾಧುಸ್ವಾಮಿ: ಜಿಲ್ಲೆಯ ತೆಂಗು ಬೆಳೆಗಾರರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ನಂಬಿಕೊಂಡಿದ್ದು ಎಂಎಸ್‌ಪಿ ಜತೆ ರಾಜ್ಯ ಸರ್ಕಾರ ಕೂಡ ಕನಿಷ್ಠ 2 ಸಾವಿರ ರೂ. ಪ್ರೋತ್ಸಾಹ ಬೆಲೆ ಘೋಷಿಸುತ್ತಾರೆ ಎಂದು ನಂಬಿದ್ದರು. ಕರೊನಾ ಸಂಕಷ್ಟದಲ್ಲಿಯೂ ಆರ್ಥಿಕ ಇಲಾಖೆ ಇತಿಮಿತಿಗಳ ನಡುವೆಯೂ ಪ್ರೋತ್ಸಾಹಧನ ಕೊಡಿಸುವಲ್ಲಿ ಮಾಧುಸ್ವಾಮಿ ಶ್ರಮವಿದೆ.
ಅವಧಿ ವಿಸ್ತರಣೆ: ರೈತರು ಯೋಜನೆಯ ಸಂಪೂರ್ಣ ಲಾಭ ಪಡೆಯಬೇಕು ಎಂಬ ಉದ್ದೇಶದಿಂದ ನೆಡ್ ಖರೀದಿ ಕೇಂದ್ರದಲ್ಲಿ ನೋಂದಣಿಗೆ ಆ.25ರ ವರೆಗಿರುವ ಅವಕಾಶವನ್ನು ಸೆ.10ರ ವರೆಗೂ ವಿಸ್ತರಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಬೆಲೆ ಹೆಚ್ಚಾಗಿರುವ ಕಾರಣದಿಂದ ರೈತರು ಈವರೆಗಿನ ನಿರಾಸಕ್ತಿಯಿಂದ ಹೊರಬರುವ ವಿಶ್ವಾಸವಿದೆ.
ಸ್ವತಃ ನಾನೂ ತೆಂಗು ಬೆಳೆಗಾರನಾಗಿರುವ ಕಾರಣಕ್ಕೆ ರೈತರ ಸಂಕಷ್ಟದ ಸ್ವ ಅನುಭವ ನನಗಿದೆ. ಹಾಗಾಗಿ, ಕೊಬ್ಬರಿಗೆ ಬೆಲೆ ಹೆಚ್ಚಿಸಲು ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತೇನೆ. ಆರ್ಥಿಕ ಇಲಾಖೆ ಇತಿಮಿತಿಯಲ್ಲಿ 1 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು, ನಮ್ಮ ಸರ್ಕಾರ ರೈತಸ್ನೇಹಿಯಾಗಿರಲಿದೆ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ