ಬೆಂಬಲ ಬೆಲೆಯಲ್ಲಿ ಕಾಟನ್ ಖರೀದಿಸಲು ಹತ್ತಿ ಬೆಳೆಗಾರರ ರೈತರ ಹೋರಾಟ ಸಮಿತಿ ಅಧ್ಯಕ್ಷ ಚಿನ್ನಯ್ಯ ನಾಯಕ್ ಒತ್ತಾಯ

Cotton Growers Farmers Fight Committee President Chinayya Nayak
ಹತ್ತಿ ಬೆಳೆಗಾರರ ರೈತರ ಹೋರಾಟ ಸಮಿತಿ ಅಧ್ಯಕ್ಷ ಚಿನ್ನಯ್ಯ ನಾಯಕ್ .
Published on

ರಾಯಚೂರು: ಹತ್ತಿ ಬೆಲೆ ಕುಸಿದಿದ್ದು, ಕೂಡಲೇ ಸಿಸಿಐನಿಂದ ಬೆಂಬಲ ಬೆಲೆಯಲ್ಲಿ ಕಾಟನ್ ಖರೀದಿಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹತ್ತಿ ಬೆಳೆಗಾರರ ರೈತರ ಹೋರಾಟ ಸಮಿತಿ ಅಧ್ಯಕ್ಷ ಚಿನ್ನಯ್ಯ ನಾಯಕ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಹತ್ತಿ ಬೆಳೆಯಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹತ್ತಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಆದ್ದರಿಂದ ರೈತರು ನಷ್ಟಕ್ಕೆ ಗುರಿಯಾಗುವಂತಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬಹಳಷ್ಟು ರೈತರು ಹತ್ತಿಯನ್ನು ಮಾರುಕಟ್ಟೆಗೆ ತರುತ್ತಿಲ್ಲ. ನೇರವಾಗಿ ಮಿಲ್‌ಗೆ ಕಳುಹಿಸುತ್ತಿದ್ದಾರೆ. ಮಿಲ್‌ಗಳಲ್ಲಿ ಕಡಿಮೆ ಬೆಲೆಗೆ ಹತ್ತಿ ಖರೀದಿಸುವುದಲ್ಲದೇ ತೂಕದಲ್ಲೂ ಮೋಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಸಭೆ ನಡೆಸಿ ರೈತರಿಗೆ ಆಗುತ್ತಿರುವ ಮೋಸ ತಡೆಯಲು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ. ಪ್ರತಿ ಕ್ವಿಂಟಾಲ್ ಹತ್ತಿಗೆ 6,500 ರಿಂದ 8,500 ರೂ.ವರೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಿಸಿಐನಿಂದ ಖರೀದಿಗೆ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಿತಿ ಪದಾಧಿಕಾರಿಗಳಾದ ರಾಜಶೇಖರಪ್ಪ, ಗೋವಿಂದ, ದೊಡ್ಡ ನರಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net