

ಶಿರಸಿ: ಅರಣ್ಯವಾಸಿಗಳ ಭೂಮಿಯ ಹಕ್ಕಿಗೆ ಸಂಬಂಧಿಸಿದ ಹೋರಾಟಕ್ಕೆ ರಾಜ್ಯದ ಪ್ರತಿಪ್ಠಿತ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದು, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹರ್ಷ ವ್ಯಕ್ತಪಡಿಸಿದೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಕನ್ಯಾಡಿ ಉಜರೆ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಂಭಾಪುರಿ ಮಠಾಧೀಶರು ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿಗಳು ಬಾಳೆಹೊನ್ನೂರು ಮಠದಲ್ಲಿ ಮಲೆನಾಡು ಮತ್ತು ಕರಾವಳಿ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ ಚಿಂತನಾ ಕೂಟದಲ್ಲಿ ಭಾಗವಹಿಸಿ ಅರಣ್ಯವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ರಹ್ಮಾನಂದ ಸ್ವಾಮೀಜಿ ಅವರು ಇತ್ತೀಚಿಗೆ ದಶಲಕ್ಷ ಗಿಡನೆಡುವ ಅಭಿಯಾನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಿದ್ದಾರೆ.
ಸಾಮಾಜಿಕ ನ್ಯಾಯದ ಅಡಿ ವಸತಿ ಮತ್ತು ಸಾಗುವಳಿ ಭೂಮಿಯಿಂದ ವಂಚಿತರಾಗುವ ರೈತ ಕುಟುಂಬಗಳ ಪರ ಸ್ವಾಮೀಜಿಗಳು ಧ್ವನಿಯಾಗಿ ನೀತಿರುವುದಕ್ಕೆ ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೃತಜ್ಞತೆ ಸಲ್ಲಿಸಿದ್ದು ಹೋರಾಟಕ್ಕೆ ಇನ್ನೂ ಹೆಚ್ಚಿನ ಹೊಸತನ ಮತ್ತು ಬೆಂಬಲ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆಂದು ರವೀಂದ್ರನಾಥ ನಾಯ್ಕ ಹೇಳಿದರು.
ನಗರದಲ್ಲಿ ಅರಣ್ಯ ಅತಿಕ್ರಮಣದಾರರನ್ನುದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಸಚಿವರ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮರುಪರಿಶೀಲನೆಗೆ ಬಾಕಿ ಇಲ್ಲದ ಪ್ರಕರಣಗಳನ್ನು ಖಾತ್ರಿಪಡಿಸಿಕೊಂಡು ಹಾಗೂ ಕರ್ನಾಟಕ ಅರಣ್ಯ ಕಾಯ್ದೆ ಕಲಂ 64 ಎ ಅಡಿ ಪ್ರಕ್ರಿಯೆ ಜರುಗಿಸಿ ಒಕ್ಕಲೆಬ್ಬಿಸುವ ಕುರಿತು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ಕಾರ್ಯಪಡೆ ರಚಿಸಲಾಗಿದೆ. ಮೊದಲಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ ರೆಸಾರ್ಟ್‌ಗಳು, ಹೋಂಸ್ಟೇಗಳನ್ನು ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963ರ 64 ಎ ಪ್ರಕ್ರಿಯೆ ಪೂರ್ಣಗೊಂಡಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ, ವಿಚಾರಣೆ ಬಾಕಿ ಇಲ್ಲದ ದೊಡ್ಡ ಒತ್ತುವರಿಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಈ ಕಾರ್ಯಪಡೆ ಕಳೆದ ಒಂದು ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರ ಸಹಿತ ಈ ಕಚೇರಿಗೆ ಕೂಡಲೇ ಸಲ್ಲಿಸಲು ಸೂಚಿಸಿದೆ ಎಂದರು.