

ಬೆಂಗಳೂರು: ದೇಶದ ಬೆನ್ನೆಲುಬು ಎಂದು ಬಿಂಬಿಸಲಾಗುವ ರೈತ ಹಾಗೂ ಕೃಷಿ ಕ್ಷೇತ್ರವು ಕವಲು ಹಾದಿಯಲ್ಲಿದೆ. ಹವಾಮಾನ ವೈಪರೀತ್ಯದ ಮಧ್ಯೆ ಕಾಯಕ ಯೋಗಿಯ ಕೃಷಿ ಚಟುವಟಿಕೆಯ ಖುಷಿ ಕಸಿದಿದೆ. ಈ ಆತಂಕವನ್ನು ದೂರಮಾಡಲು ಸರ್ಕಾರ ಈ ವರ್ಷ ಹಲವು ಯೋಜನೆಗಳನ್ನು ರೂಪಿಸಿ ಅವುಗಳ ಜಾರಿಗಾಗಿ ಪೂರಕ ವಾತಾವರಣ ಕಲ್ಪಿಸಿದೆ. ಆದರೂ, ಸರ್ಕಾರ ಕೈಗೊಂಡ ಉಪಕ್ರಮ ಏನೇನು ಸಾಲದು ಎಂಬುದು ರೈತ ಮುಖಂಡರ ಆರೋಪ. ಕೆಲವೆಡೆ ಪ್ರವಾಹದಿಂದ ಬೆಳೆ ನಷ್ಟವಾದರೂ, ಅನ್ನದಾತರ ಶ್ರಮದಿಂದ ಆಹಾರೋತ್ಪಾದನೆ ಹೆಚ್ಚಳಗೊಂಡು ಈ ವರ್ಷ ಒಂದಿಷ್ಟು ನಿರಾಳತೆ ಮೂಡಿತು.
ಪಿಎಂ ಕಿಸಾನ್ ಯೋಜನೆಯ ಸದ್ದು:
ರೈತರ ಆರ್ಥಿಕ ಅಗತ್ಯತೆಯನ್ನು ಪೂರೈಸಲು ಪ್ರಾರಂಭಿಸಿರುವ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆ (ಪಿಎಂ - ಕಿಸಾನ್) ಕೋಟ್ಯಂತರ ಅನ್ನದಾತರಿಗೆ ಉಪಯೋಗವಾಗುತ್ತಿದೆ. ಮೂರನೇ ಬಾರಿ ಅಧಿಕಾರಕ್ಕೇರಿದ ಬೆನ್ನಲ್ಲೇ ಎನ್‌ಡಿಎ ಸರ್ಕಾರದಿಂದ ಈ ಯೋಜನೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವರ್ಷದಲ್ಲಿ 4 ಸಮಾನ ಕಂತುಗಳಲ್ಲಿ 6 ಸಾವಿರ ರೂ. ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈವರೆಗೆ 11 ಕೋಟಿಗೂ ಅಧಿಕ ಕೃಷಿಕರಿಗೆ 2.81 ಲಕ್ಷ ಕೋಟಿ ರೂ.ಗಳನ್ನು ನೇರ ಲಾಭ ಹಸ್ತಾಂತರ (ಡಿಬಿಟಿ) ವ್ಯವಸ್ಥೆ ಮೂಲಕ ವರ್ಗಾಯಿಸಲಾಗಿದೆ.
ಬೆಳೆ ನಷ್ಟಕ್ಕೆ ಸಲ್ ಬಿಮಾ ನೆರವು:
ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರು ತಮ್ಮ ಸಲು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ವಿಮೆ ಮೂಲಕ ಬೆಳೆ ನಷ್ಟ ಭರಿಸುವ ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆ ಕೃಷಿಕರಿಗೆ ವರದಾನವಾಗಿದೆ. ರೈತರು ಪಾವತಿಸಿರುವ 32,440 ಕೋಟಿ ರೂ. ಪ್ರೀಮಿಯಂಗೆ ಎದುರಾಗಿ 1.64 ಲಕ್ಷ ಕೋಟಿ ರೂ. ಅಂದರೆ ಐದು ಪಟ್ಟು ಮೊತ್ತವು ರೈತರ ಕೈಸೇರಿ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿರುವುದು ವ್ಯವಸಾಯ ಕ್ಷೇತ್ರದಲ್ಲಿ ಸ್ಥಿರತೆ ಕಾಣುವಂತಾಗಿದೆ.
22 ಬೆಳೆಗಳಿಗೆ ಎಂಎಸ್‌ಪಿ ಬಲ:
ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ದರ ಸಿಗುವ ಹಿನ್ನೆಲೆ ಈ ವರ್ಷದ ಆರಂಭದಲ್ಲೇ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದ್ದು ಕೃಷಿಕರಿಗೆ ಖುಷಿ ಕೊಟ್ಟ ಸಂಗತಿ. ಭತ್ತ, ರಾಗಿ, ನೆಲಗಡಲೆ, ಸೂರ್ಯಕಾಂತಿ, ಗೋಧಿ, ಕೊಬ್ಬರಿ, ಮೆಕ್ಕೆಜೋಳ ಸೇರಿ ಇತರ ಬೆಳೆಗಳಿಗೆ ಎಂಎಸ್‌ಪಿ ಬಲ ದೊರೆತು ರೈತರ ಆದಾಯ ಕೈತಪ್ಪದಂತೆ ಸರ್ಕಾರ ಕೈಹಿಡಿಯಿತು.
ನಿಲ್ಲದ ರೈತರ ಪ್ರತಿಭಟನೆ:
ರೈತ ಪರ ಕಾನೂನುಗಳ ಸರಳೀಕರಣ, ಡಾ. ಸ್ವಾಮಿನಾಥನ್ ಸಮಿತಿ ವರದಿ ಜಾರಿ, ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ೋಷಣೆ ಸೇರಿ ಇನ್ನಿತರ ಸೌಲಭ್ಯ ಜಾರಿಗೆ ಒತ್ತಾಯಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೃಷಿಕರು ನಡೆಸಿರುವ ಹೋರಾಟದ ಕಾವು ಇನ್ನೂ ಆರಿಲ್ಲ. ಪಂಜಾಬ್-ಹರಿಯಾಣ ಗಡಿಯ ಶಂಭುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ದಿಲ್ಲಿಯನ್ನು ನಡುಗಿಸಿದ್ದು ನಿಜ. ಹಿಂಸೆ ಬಿಟ್ಟು ಶಾಂತಿ ಮಾರ್ಗದಲ್ಲಿ ಪ್ರತಿಭಟನೆ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದರೂ, ರೈತ ಮುಖಂಡರ ಮೊಂಡಾಟದಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಸರ್ಕಾರದೊಂದಿಗೆ ಮಾತುಕತೆ ಮುರಿದುಬಿದ್ದ ಬಳಿಕ ಪಂಜಾಬ್-ಹರಿರ್ಯಾಣ ರೈತರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಯಿತು. ಹಲವು ರಾಜ್ಯಗಳಲ್ಲೂ ಸಾಂಕೇತಿಕ ಪ್ರತಿಭಟನೆ ನಡೆಸಿ ನೈತಿಕ ಬೆಂಬಲ ನೀಡಲಾಯಿತು. ಸದ್ಯ ಹೋರಾಟದ ಕಿಡಿ ತಣ್ಣಗಾಗಿದ್ದರೂ, ಬೇಡಿಕೆ ಈಡೇರದಿದ್ದಲ್ಲಿ ಬೀದಿಗಿಳಿಯುವ ಎಚ್ಚರಿಕೆ ರೈತ ಮುಖಂಡರಿಂದ ರವಾನೆಯಾಗಿದೆ.
ಅನ್ನ ಯೋಜನೆಗೆ ಮತ್ತೆ ಮಣೆ:
ದೇಶದಲ್ಲಿ ಬಡವರು ಹಾಗೂ ಕೆಳಹಂತದಲ್ಲಿರುವ ಜನರಿಗೆ ಮಾಸಿಕ ಆಹಾರ ಧಾನ್ಯ ವಿತರಿಸುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತೆ ಐದು ವರ್ಷ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದಿಂದಾಗಿ 81.35 ಕೋಟಿ ಲಾನುಭವಿಗಳಿಗೆ ಅನುಕೂಲವಾಗಲಿದೆ. ಈ ವರ್ಷದ ಮೊದಲ ದಿನದಿಂದಲೇ ಅನುಷ್ಠಾನಕ್ಕೆ ತರಲಾಗಿದ್ದು, ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ ಲಭ್ಯವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಮುಂದಿನ 5 ವರ್ಷದಲ್ಲಿ ಸರ್ಕಾರ 11.80 ಲಕ್ಷ ಕೋಟಿ ರೂ. ಖರ್ಚು ಮಾಡಲಿದ್ದು, ಅಷ್ಟೂ ಜನರಿಗೂ ಆಹಾರ ಭದ್ರತೆ ಒದಗಿಸಲಿದೆ.
ಸಹಕಾರ ಚಳವಳಿಗೆ ಬಲ:
ಗ್ರಾಮೀಣ ಭಾಗದಲ್ಲಿ ರೈತ ಪರ ವಾತಾವರಣ ಮೂಡಿಸುವ ಜತೆಗೆ ಸ್ಥಳೀಯವಾಗಿಯೇ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರ ಚಳವಳಿಗೆ ಕೇಂದ್ರ ಸರ್ಕಾರವು ಬೆಂಬಲವಾಗಿ ನಿಂತಿದೆ. ಸಹಕಾರ ಕಾಯ್ದೆಗೆ ತಿದ್ದುಪಡಿ, ನಿಯಮಾವಳಿಗಳ ಸರಳೀಕರಣಕ್ಕೆ ಒತ್ತು ನೀಡಲಾಗಿದೆ. ಮುಂದಿನ ಐದು ವರ್ಷದಲ್ಲಿ ಹೊಸದಾಗಿ 2 ಲಕ್ಷ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಎಂ-ಪ್ಯಾಕ್ಸ್) ರಚಿಸಲು ಸೆ.19ರಂದು ಎಸ್‌ಒಪಿ ಪ್ರಕಟಿಸಲಾಯಿತು. ಇದಾಗಿ 86 ದಿನಗಳಲ್ಲೇ 11,695 ಎಂ-ಪ್ಯಾಕ್ಸ್ ನೋಂದಾಯಿಸಿ ಕಾರ್ಯಾಚರಣೆಗೆ ಅಣಿಗೊಳಿಸಿರುವುದು ಸಹಕಾರ ಚಳವಳಿಗೆ ಇನ್ನಷ್ಟು ಬಲ ನೀಡಿದೆ.
109 ಹೊಸ ತಳಿಗಳ ಬಿಡುಗಡೆ:
ಕೃಷಿ ಹಾಗೂ ತೋಟಗಾರಿಕೆ ಉತ್ತೇಜನಕ್ಕಾಗಿ ಭಾರತಿಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್) ಮೂಲಕ ಆಗಸ್ಟ್ 2ನೇ ವಾರದಲ್ಲಿ 109 ಹೊಸ ತಳಿಗಳನ್ನು ರೈತರಿಗಾಗಿ ಬಿಡುಗಡೆ ಮಾಡಲಾಯಿತು. 40 ತೋಟಗಾರಿಕೆ ಬೆಳೆಗಳು, 7 ಬಗೆಯ ಎಣ್ಣೆಕಾಳು ತಳಿಗಳು ಸೇರಿ ಕೃಷಿಯ ವಿವಿಧ ಬೆಳೆಗಳು ಹೆಚ್ಚು ಇಳುವರಿ ಹಾಗೂ ಬರನಿರೋಧಕ ತಾಳಿಕೊಳ್ಳುವ ಸಾಮರ್ಥ್ಯವನ್ನು ಇವು ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಬಿಡುಗಡೆ ಮಾಡಿರುವ ಈ ತಳಿಗಳು ಈಗ ದೇಶಾದ್ಯಂತ ರೈತರಿಗೆ ಲಭ್ಯವಾಗಿವೆ.
ನೈಸರ್ಗಿಕ ಕೃಷಿ ಉತ್ತೇಜನಕ್ಕೆ ಒತ್ತು:
ದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಲು ‘ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್’ (ಎನ್‌ಎಂಎನ್‌ಎಫ್) ಅನುಷ್ಠಾನಕ್ಕೆ ತರಲು ಕಳೆದ ನವೆಂಬರ್ ಕೊನೆಯ ಭಾಗದಲ್ಲಿ ಕೇಂದ್ರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಎರಡು ವರ್ಷದ ಅವಧಿಗೆ 2,481 ಕೋಟಿ ರೂ. ಮೊತ್ತದ ಈ ಮಿಷನ್ ಅಡಿಯಲ್ಲಿ ಗ್ರಾಪಂ ವ್ಯಾಪ್ತಿಯ 15 ಸಾವಿರ ಕ್ಲಸ್ಟರ್‌ಗಳ 7.5 ಲಕ್ಷ ಹೆಕ್ಟೇರ್‌ನಲ್ಲಿ ನೈಸರ್ಗಿಕ ಕೃಷಿ ಕೈಗೆತ್ತಿಕೊಳ್ಳಲಾಗುತ್ತದೆ. ಕೃಷಿ ವಿವಿಗಳು, ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮೂಲಕ 18.75 ಲಕ್ಷ ರೈತರಿಗೆ ತರಬೇತಿ ನೀಡಿ ದೇಶದಲ್ಲಿ ಪರಂಪರಾಗತವಾಗಿ ಬೆಳೆದು ಬಂದಿರುವ ದೇಶಿ ಕೃಷಿಯನ್ನು ಮುನ್ನೆಲೆಗೆ ತರುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.