ಉಚ್ಚಾಟನೆ ಬಳಿಕ ನನಗೆ ಬೆಂಬಲ ಹೆಚ್ಚಳ: ಈಶ್ವರಪ್ಪ

Kse
ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ
Published on

ಶಿವಮೊಗ್ಗ: ನನ್ನ ಉಚ್ಚಾಟನೆ ತಾತ್ಕಾಲಿಕ. ನನ್ನ ಗೆಲುವು ನಿಶ್ಚಿತ. ಗೆದ್ದ ಮೇಲೆ ಬಿಜೆಪಿ ಸೇರುವುದೂ ಸತ್ಯ. ಬಿಜೆಪಿಯಿಂದ ನನ್ನ ಉಚ್ಚಾಟನೆಯಾದ ಬಳಿಕ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

40 ವರ್ಷ ಪಕ್ಷ ಕಟ್ಟಿ ಬೆಳೆಸಿದ್ದು ನೀವು, ನಿಮಗೆ ಉಚ್ಚಾಟನೆ ಶಿಕ್ಷೆಯೇ? ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ನಿಮಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಉಚ್ಚಾಟನೆ ಬಳಿಕ ನನಗೆ ಬೆಂಬಲ ಹೆಚ್ಚುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನ ಸ್ಪರ್ಧೆ ನಿಶ್ಚಿತ ಎಂಬುದು ಈಗ ಎಲ್ಲರಿಗೂ ದೃಢಪಟ್ಟಿದೆ. ಅನೇಕರು ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ. ಹೊಸನಗರ ತಾಲೂಕಿನ ಹಲವು ಗ್ರಾಪಂ ಅಧ್ಯಕ್ಷರು, ಸದಸ್ಯರು ರಾಷ್ಟ್ರಭಕ್ತರ ಬಳಗ ಸೇರ್ಪಡೆಯಾಗಿದ್ದಾರೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲೂ ಕೂಡ ಅನೇಕ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ. ಚುನಾವಣೆಯಲ್ಲಿ ರೈತನ ಚಿಹ್ನೆ ಸಿಕ್ಕಿರುವುದು ನನ್ನ ಪುಣ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸಿಗರು ಟೀಕೆ ಮಾಡಿದರೆ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಅವರಿಗೆ ಸಿಗುವುದು ಚೊಂಬು ಮಾತ್ರ. ಮಾಂಗಲ್ಯದ ಬಗ್ಗೆ ನರೇಂದ್ರ ಮೋದಿ ನೀಡಿದ ಹೇಳಿಕೆ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಸೋಲಿಸಲು ಪಿತೂರಿ ಮಾಡಿ ನನ್ನ ಹೆಸರಿನ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಿದ್ದಾರೆ. ಜನ ದಡ್ಡರಲ್ಲ. ನನ್ನ ಫೋಟೊ ನೋಡಿ, ಕಬ್ಬಿನ ಬೆಳೆಗಾರ ಚಿಹ್ನೆಗೆ ಮತ ಹಾಕುತ್ತಾರೆ. ಚುನಾವಣೆ ಪ್ರಚಾರ ಬಿರುಸಾಗಿ ನಡೆಯುತ್ತಿದೆ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ನಡೆಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net